ಯಾದಗಿರಿ: ಎಮ್ಮೆಯೊಂದು ಎರಡು ಮುಖದ ಕರುವಿಗೆ ಜನ್ಮ ನೀಡಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ ಘಟನೆ ಯಾದಗಿರಿಯ ಕನಕನಗರ ಬಡಾವಣೆಯಲ್ಲಿ ನಡೆದಿದೆ.
ದೇವಪ್ಪ ಎಂಬುವರಿಗೆ ಸೇರಿದ ಎಮ್ಮೆ ಇದಾಗಿದೆ. ಇಂದು ಮಧ್ಯಾಹ್ನ ಎಮ್ಮೆ ಈ ವಿಚಿತ್ರ ಕರುಗಳಿಗೆ ಜನ್ಮ ನೀಡಿದೆ. ಎಮ್ಮೆ ಕರುವಿಗೆ ಎರಡು ಮುಖ ಇರುವುದರಿಂದ ಉಸಿರಾಟ ತೊಂದರೆ ಉಂಟಾಗಿದ್ದು, ಜನ್ಮತಾಳಿದ 2 ಗಂಟೆಯಲ್ಲಿ ಸಾವನ್ನಪ್ಪಿದೆ. ಆದರೆ, ಕರುವಿಗೆ ಎರಡು ಮುಖ ಇದ್ದಿದ್ದನ್ನು ಕಂಡು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.
ಮೊನ್ನೆಯಷ್ಟೇ ಧಾರವಾಡ ಹೊರವಲಯದ ಆಂಜನೇಯ ನಗರದ ಬಳಿಯ ಫಾರಂನಲ್ಲಿನ ಕೋಳಿಗೆ ಮೂರು ಕಾಲು ಬೆಳೆದ ಸುದ್ದಿ ಬೆಳಕಿಗೆ ಬಂದಿತ್ತು. ಎರಡು ಕಾಲುಗಳ ಜೊತೆ ಇನ್ನೊಂದು ಕಾಲು ಬೆನ್ನಿನ ಕೆಳ ಭಾಗದಲ್ಲಿ ಬೆಳೆದಿತ್ತು. 15 ದಿನ ಈ ಮರಿಗೆ ಓಡಾಡಲು ತೊಂದರೆ ಆಗಿರಲಿಲ್ಲ. ಆದರೆ ಪ್ರತ್ಯೇಕ ಕಾಲು ಕ್ರಮೇಣ ಬೆಳೆದಿದ್ದರಿಂದ ಈಗ ಕೊಂಚ ತೊಂದರೆಯಾಗುತ್ತಿದೆ.
ಈ ಕೋಳಿಮರಿಯನ್ನು ಇಲ್ಮುದ್ದಿನ್ ಮೊರಬ ಕುಟುಂಬ ಸಾಕುತ್ತಿದ್ದು, ಮಾರಾಟ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದಾರೆ. ಈ ಕೋಳಿ ಮರಿಗೆ ಮೂರು ಕಾಲು ಇರುವುದನ್ನು ಕೇಳಿದ ಜನರು ಕೂಡಾ ಅತ್ಯಂತ ಕುತೂಹಲದಿಂದ ಇದನ್ನು ನೋಡಲು ಬರುತ್ತಿದ್ದಾರೆ. ಜೊತೆಗೆ ಇದರ ಫೋಟೋ ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.