– ಸೋಫಿಯಾ ಗ್ಯಾರೆಟ್ ಸಮಾಧಿ ಹುಡುಕಿಕೊಂಡ ಬಂದ ವೃದ್ಧ!
– ಪ್ರಖ್ಯಾತ ಸಾಹಿತಿ ಜಾನ್ ಗ್ಯಾರೆಟ್ ಪತ್ನಿ ಸೋಫಿಯಾ ಗ್ಯಾರೆಟ್
ಚಿಕ್ಕಬಳ್ಳಾಪುರ: ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಅದೆಷ್ಟೋ ಜನ ಬ್ರಿಟೀಷರು ಮೃತಪಟ್ಟು, ಭಾರತದಲ್ಲೇ ಸಮಾಧಿಯಾಗಿದ್ದಾರೆ. ಅದೊಂದು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನೇ ತಮ್ಮ ಅಚ್ಚುಮೆಚ್ಚಿನ ತಾಣ ಮಾಡಿಕೊಂಡಿದ್ದ ಕೆಲವು ಬ್ರಿಟೀಷರು, ಅಲ್ಲೆ ಸಮಾಧಿಯೂ ಆಗಿದ್ದಾರೆ. ಆದ್ರೆ ಈಗ ತಮ್ಮ ಪೂರ್ವಿಕರ ಸಮಾಧಿಗಳನ್ನು ಹುಡುಕಿಕೊಂಡು ಕೆಲ ಬ್ರಿಟೀಷರು, ಮತ್ತೆ ಅಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಹೀಗೆ ತಮ್ಮ ಪೂರ್ವಿಕರ ಸಮಾಧಿಯನ್ನು ಹುಡುಕಿಕೊಂಡು ಬರುತ್ತಿರುವ ಸ್ಥಳ (Nandigiri) ನಂದಿಗಿರಿಧಾಮ. ಬ್ರಿಟೀಷರ ಆಳ್ವಿಕೆಯಲ್ಲಿದ್ದ ಮೈಸೂರು ರಾಜ್ಯದ ಕೆಲವು ಬ್ರಿಟೀಷ್ ಅಧಿಕಾರಿಗಳು, ನಂದಿಗಿರಿಧಾಮವನ್ನೇ ತಮ್ಮ ಆವಾಸ ಸ್ಥಾನ ಮಾಡಿಕೊಂಡಿದ್ದರು. ಮೈಸೂರು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಬ್ರಿಟೀಷ್ ಅಧಿಕಾರಿ, ಸಾಹಿತಿ ಹಾಗೂ ಮುದ್ರಣಕಾರ ಜಾನ್ ಗ್ಯಾರೆಟ್ (John Garrett) ಅವರ ಪತ್ನಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿಯನ್ನು ಹುಡುಕಿಕೊಂಡು ಅವರ ಸಂಬಂಧಿಗಳು ಬಂದಿದ್ದರು. ಇತ್ತೀಚೆಗೆ ಲಂಡನ್‍ನಿಂದ ಗುಜರಾತ್‍ಗೆ ಆಗಮಿಸಿ, ಅಲ್ಲಿಂದ ನಂದಿಗಿರಿಧಾಮಕ್ಕೆ ಆಗಮಿಸಿ ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಹುಡುಕಾಡಿ ತಮ್ಮವರನ್ನು ನೆನೆದು ವ್ಯಕ್ತಿಯೊಬ್ಬರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ
ಈ ಬಗ್ಗೆ ಪ್ರವಾಸಿ ಮಿತ್ರ ಗೈಡ್ ನಳಿನಿಯವರು ಪ್ರತಿಕ್ರಿಯಿಸಿ, ಕಳೆದ ಕೆಲವು ತಿಂಗಳುಗಳ ಹಿಂದೆ ಎರಡು ಮೂರು ಬಾರಿ ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ಸೋಫಿಯಾ ಗ್ಯಾರೆಟ್ ಸಂಬಂಧಿಗಳು ಗಿರಿಧಾಮದಲ್ಲಿ ಸಮಾಧಿ ಹುಡುಕಾಡಿದ್ದರು. ಆದ್ರೆ ಪತ್ತೆಯಾಗಿರಲಿಲ್ಲ. ಮತ್ತೊಂದೆಡೆ ದಾಖಲೆಗಳಲ್ಲಿ ಸೋಫಿಯಾ ಗ್ಯಾರೆಟ್ ಸಮಾಧಿ ನಂದಿಗಿರಿಧಾಮದಲ್ಲಿ ಇದೆ ಎನ್ನುವ ಮಾಹಿತಿ ಹಿನ್ನಲೆ ಮತ್ತೆ ಮೂರನೆ ಬಾರಿಗೆ ಗಿರಿಧಾಮಕ್ಕೆ ಆಗಮಿಸಿ, ಪ್ರವಾಸಿ ಮಿತ್ರ ಗೈಡ್ ಮೂಲಕ ಸಮಾಧಿಯನ್ನು ಪತ್ತೆ ಹಚ್ಚಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ತಪ್ಪಲಿನಲ್ಲಿರುವ ಸುಲ್ತಾನಪೇಟೆ ಗ್ರಾಮದ ಬಳಿ ಬ್ರಿಟೀಷರ ಸಮಾಧಿಗಳಿವೆ. ಬ್ರಿಟೀಷ್ ಅಧಿಕಾರಿಗಳು ಹಾಗೂ ಅವರ ಕುಟುಂಬದವರ ಸಮಾಧಿಗಳನ್ನು ನೋಡಬಹುದಾಗಿದೆ. ಆದರೆ ಸೂಕ್ತ ನಿರ್ವಾಹಣಾ ಕೊರತೆಯಿಂದ ಬ್ರಿಟೀಷರ ಸ್ಮಶಾನಗಳು ಈಗ ಪಾಳು ಬೀಳುವಂತಾಗಿವೆ. ಇದನ್ನೂ ಓದಿ: ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು