ಆ ಸಾಧು ನೋಡನೋಡುತ್ತಿದ್ದಂತೆ ರಾಕೆಟ್ ಥರಾ ಹಾರಿ ಹೋಗಿದ್ರು..!!

Public TV
3 Min Read

ಇವರು ಒಬ್ಬ ವಿಚಿತ್ರ ಸಾಧು. ತನಗಿರೋ ಚಟಗಳಿಂದಲೇ ಹೆಸರುವಾಸಿಯಾದ ವಿಲಕ್ಷಣ ಸಾಧು. ತನ್ನ ನಿಜ ನಾಮಧೇಯವನ್ನು ಜಗತ್ತಿನಿಂದ ಮುಚ್ಚಿಟ್ಟ ವಿಚಿತ್ರ ವ್ಯಕ್ತಿತ್ವ ಇವರದ್ದು. ಬೌದ್ಧ ಮತದ ಝೆನ್ ಸಿದ್ಧಾಂತವನ್ನು ಪ್ರತಿಪಾದಿಸಿ ಜನರಿಗೆ ಬೋಧಿಸಿದ ಅಪ್ರತಿಮ ಗುರು ಆತ. ನೋಡೋಕೆ ಸಾಮಾನ್ಯರಂತೆ ಕಂಡ್ರೂ ಬಯಸಿದಾಗ ಬೇಕಾದಲ್ಲಿಗೆ ಹಾರಬಲ್ಲ ಶಕ್ತಿ ಇದ್ದ ಪವಾಡ ಪುರುಷ.

ಅದೊಂದು ದಿನ, ಸಮಯ ಮುಸ್ಸಂಜೆಯ ಆಸುಪಾಸಿರಬಹುದೇನೋ. ಅಷ್ಟೊತ್ತಿಗೆ ಅಲ್ಲಿದ್ದ ಭಕ್ತನೊಬ್ಬ ತನ್ನ ಮೊಬೈಲ್ ಕ್ಯಾಮೆರಾದಿಂದ ಗುಡಿಯ ಆವರಣದಲ್ಲಿ ಕೂತಿದ್ದ ಈ ವ್ಯಕ್ತಿಯನ್ನೇ ಕೇಂದ್ರೀಕರಿಸಿಕೊಂಡು ಚಿತ್ರೀಕರಣ ಮಾಡ್ತಿದ್ದ. ಹೀಗೆ ಅರ್ಧ ಘಂಟೆ ಕಳೆದಿರಬಹುದೇನೋ. ಆ ನಿಂತಿದ್ದ ಸಾಧು ಒಮ್ಮಿಂದೊಮ್ಮೆಗೆ ಅಗೋಚರ ಶಕ್ತಿ ಪ್ರಾಪ್ತರಾದವರಂತೆ ಕಂಡು ಬಂದ್ರು. ಮೈ ಸಣ್ಣಗೆ ಕಂಪಿಸ್ತಾ ಇತ್ತು. ಆಗ ಅಲ್ಲೊಂದು ಪವಾಡವೇ ಘಟಿಸ್ತು. ರಾಕೆಟ್ ಉಡಾವಣೆ ಮಾಡಿದಷ್ಟೇ ವೇಗದಲ್ಲಿ, ನಿಂತಿದ್ದ ವ್ಯಕ್ತಿ ಗಾಳಿಯಲ್ಲಿ ರೊಯ್ಯನೆ ಮಾಯವಾಗಿಬಿಟ್ಟಿದ್ರು. ಹೌದು. ಇದಾಗಿದ್ದು, ತಿರುವಣ್ಣಾಮಲೈ ದೇವಾಲಯದ ಆವರಣದಲ್ಲಿ. ಅಂದು ರಾಕೆಟ್ ಥರಾ ಹಾರಿ ಹೋಗಿದ್ದ ಪವಾಡ ಪುರುಷರೇ, ಮೂಕುಪೊಡಿ ಸಿದ್ಧರ್ ಅನ್ನೋ ಸಾಧು.

ಅಂದ ಹಾಗೆ, ಈ ಮೂಕುಪೊಡಿ ಸಿದ್ಧರ್ ಬರಿಗಾಲಿನಲ್ಲಿ ಎಷ್ಟು ದೂರ ಬೇಕಾದ್ರೂ ಅನ್ನಾಹಾರಗಳಿಲ್ಲದೆ ನಡೆದು ಹೋಗೋ ಶಕ್ತಿ ಗಳಿಸಿದ್ರು. ಒಮ್ಮೆ ಧ್ಯಾನಕ್ಕೆ ಕೂತ್ರೆ ದಿನಗಟ್ಟಲೆ, ವಾರಗಟ್ಟಲೆ ಏಳ್ತಾನೇ ಇರಲಿಲ್ಲ. ರಾತ್ರಿ ಹಗಲನ್ನೋ ಪರಿವೆಯೇ ಇಲ್ಲದೆ ತಪೋನಿರತರಾಗಿಬಿಡುತ್ತಿದ್ದವರು ಮೂಕುಪೊಡಿ ಸಿದ್ಧರ್.

ಈ ಸಾಧುವಿಗೆ ಮೂಕುಪೊಡಿ ಸಿದ್ಧರ್ ಅನ್ನೋ ಹೆಸರು ಬಂದಿರೋದ್ರ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ. ಇವರು ದಿನಾ ನಶ್ಯವನ್ನು ಸೇವಿಸ್ತಿದ್ರು. ಮೂಗಿನ ಹೊಳ್ಳೆಯ ತುಂಬಾ ನಶ್ಯ ತುಂಬಿಸಿ ಇವರದ್ದೇ ಲೋಕದಲ್ಲಿ ಇದ್ದು ಬಿಡ್ತಿದ್ರು. ಆದ್ರೆ, ಇವರ ಹೆಸರಿನ ಹಿಂದೆ ಬಿದ್ದು, ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಬಯಸಿದವ್ರಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಹೀಗಾಗಿ ಮೂಗಿಗೆ ನಶ್ಯ ಹಾಕೋ ಸಿದ್ಧರ್ ಅನ್ನೋ ಹೆಸರು ಬಂತು. ಈ ಮೂಕುಪೊಡಿ ಸಿದ್ಧರ್ ಯಾರಾದ್ರೂ ಎದುರಿಗೆ ಸಿಕ್ರೆ ಮನಸ್ಸಾದ್ರೆ ಮಾತಾಡಿಸ್ತಿದ್ರು. ಹೊರ ಜಗತ್ತಿಗೆ ಹುಚ್ಚನ ರೀತಿ ಗೋಚರಿಸೋ ಇವರ ಶಕ್ತಿಯನ್ನು ಕಣ್ಣಾರೆ ಕಂಡ ಜನ ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯರಂತೆ ಮೈಯ್ಯಲ್ಲೊಂದು ಸಣ್ಣ ಬಟ್ಟೆ ತುಂಡನ್ನ ಸುತ್ತಿ ಓಡಾಡೋ ಇವರಿಗೆ ಗಾಳಿ, ಮಳೆ, ಚಳಿಯ ಹಂಗಿರಲಿಲ್ಲ. ಇವರದ್ದು ತೀಕ್ಷ್ಣವಾದ ದೃಷ್ಟಿ. ಇವ್ರ ಕಣ್ಣಲ್ಲಿ ಕಣ್ಣಿಟ್ಟು ನೋಡೋದು ಬಹಳಾನೇ ಕಷ್ಟ. ಇವರ ಕೃಪಾಕಟಾಕ್ಷ ಬಿದ್ರೆ ಸಾಕು ಭಾಗ್ಯೋದಯವಾಗ್ತಿತ್ತು ಅಂತಾ ಇಲ್ಲಿನ ಭಕ್ತರು ಹೇಳ್ತಾರೆ.

ಪ್ರತೀ ಮುಂಜಾನೆ ನೂರಾರು ಸಂಖ್ಯೆಯಲ್ಲಿ ಅಣ್ಣಾಮಲೈ ದೇವಾಲಯದ ಬಳಿ ಮೂಕುಪೊಡಿ ಸಿದ್ಧರ್ ದರ್ಶನಕ್ಕಾಗಿ ಕಾಯ್ತಾ ಇರ್ತಿದ್ರು. ಬರೋ ಜನರ ಬಳಿ ಹಣ ತೆಗೆದು ತನ್ನ ಬಟ್ಟೆಗೆ ಹಾಕುವಂತೆ ಸೂಚಿಸ್ತಿದ್ರು. ಕೆಲವೇ ದಿನಗಳಲ್ಲಿ ಇದು ದೊಡ್ಡ ಗಂಟಾಗಿ ಮಾರ್ಪಾಡಾದ ನಂತ್ರ ಈ ಹಣವನ್ನು ತೆಗೆದುಕೊಂಡು ತನ್ನ ಜೊತೆಗಿರೋ ಬಡ ಜನರಿಗೆ ಹಂಚಿಬಿಡ್ತಿದ್ರು.

ವಿಸ್ಮಯಕಾರಿ ಶಕ್ತಿಗಳನ್ನು ತಮ್ಮದಾಗಿಸಿಕೊಂಡ ಸಿದ್ಧರ್ ಎದುರಿಗಿರೋರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಕರಾರುವಾಕ್ಕಾಗಿ ಹೇಳ್ತಾರೆ. ಸಮುದ್ರದ ಅಲೆಗಳನ್ನು ಯಾವ ದಿಕ್ಕಿಗೆ ಬೇಕಾದ್ರೂ ಆ ದಿಕ್ಕಿಗೆ ಹೊರಳಿಸ್ತಿದ್ರು ಅನ್ನೋದನ್ನ ಕಣ್ಣಾರೆ ಕಂಡವರು ಹೇಳ್ತಾರೆ. ಸಿದ್ಧರ್ ಇಡೀ ಪ್ರಪಂಚದ ಭವಿಷ್ಯವನ್ನು ಕಣ್ಣಿಗೆ ಕಟ್ಟೋ ಹಾಗೆ ಉತ್ತರ ಕೊಡ್ತಿದ್ರು. ಕೆಲವೊಮ್ಮೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ವರ್ತಿಸ್ತಿದ್ರು. ಸಾಮಾನ್ಯರ ಕಣ್ಣಿಗೆ ಕಾಣದ ಅಗೋಚರ ಶಕ್ತಿಗಳು ಇವ್ರ ಕಣ್ಣಿಗೆ ಕಾಣ್ತಿದ್ವು ಅಂತಾರೆ ಇಲ್ಲಿನ ಜನ. ಯಾವುದೇ ತೆರನಾದ ರೋಗವೇ ಆಗಿರ್ಲಿ ಇವರನ್ನು ನೋಡಿದ ತಕ್ಷಣ ನಿವಾರಣೆಯಾಗುತ್ತಿತ್ತಂತೆ.

ಜನ್ರನ್ನ ನೋಡಿಯೇ ನಿಮ್ಮ ಹೆಸರು, ತಂದೆ ತಾಯಿ ಕುಲ ಜಾತಕ ಎಲ್ಲವನ್ನೂ ಪಟ ಪಟನೆ ಹೇಳೋ ಶಕ್ತಿ ಈ ಮೂಕುಪೊಡಿ ಸಿದ್ಧರ್ ಗೆ ಇತ್ತಂತೆ. ಹೀಗೆ ಅತೀಂದ್ರಿಯ ಶಕ್ತಿಗಳನ್ನು ಹೊಂದಿರೋ ಸಿದ್ಧರ್ ತಮ್ಮ ಸಾವಿನ ಬಗ್ಗೆಯೂ ಅದೊಂದು ದಿನ ಅದ್ಭುತವೊಂದನ್ನ ಸೃಷ್ಟಿಸಿಬಿಟ್ಟಿದ್ರು. ಇವರು ಸತ್ತಿದ್ದಾರೆಂದು ತಿಥಿ ಮಾಡೋದಕ್ಕೆ ಹೊರಟ ಜನರ ಮುಂದೆ ತಮ್ಮ ಬ್ರಹ್ಮ ಜ್ಞಾನದಿಂದ ಅಲ್ಲಿನ ವಿಷಯ ತಿಳಿದುಕೊಂಡು ಪ್ರತ್ಯಕ್ಷರಾಗಿಬಿಟ್ಟಿದ್ರು. ಮೂಕುಪೊಡಿ ಸಿದ್ಧರ್ ಹಿನ್ನೆಲೆಯಾಗ್ಲೀ, ಇವರ ಶಕ್ತಿಯ ವ್ಯಾಪ್ತಿಯಾಗ್ಲೀ ಗೊತ್ತಿಲ್ಲದಿದ್ರೂ ಇಂದಿಗೂ ಜನರಿಗೆ ಇವರೊಂದು ಅಚ್ಚರಿಯಾಗಿ ಕಾಣ್ತಾರೆ. ಇಂತಹಾ ವಿಸ್ಮಯಕಾರಿ ವ್ಯಕ್ತಿಗಳು ನಮ್ಮ ನಡುವೆ ಇದ್ರು ಅನ್ನೋದೇ ಅಚ್ಚರಿ.

– ಕ್ಷಮಾ ಭಾರದ್ವಾಜ್, ಉಜಿರೆ

Share This Article
Leave a Comment

Leave a Reply

Your email address will not be published. Required fields are marked *