– ಮಗನ ಮಾತು ನಂಬಿ ದೂರು ಕೊಟ್ಟಿದ್ದ ತಂದೆ
– ಪ್ರಕರಣ ಬೆನ್ನತ್ತಿ ಹೊರಟ ಪೊಲೀಸರಿಗೆ ಗೊತ್ತಾಯ್ತು ಬಾಲಕನ ಅಸಲಿಯತ್ತು
ಚಾಮರಾಜನಗರ: ಮನೆಯವರಿಗೆ ಗೊತ್ತಾಗದಂತೆ ಐಸ್ ಕ್ರೀಂ, ಗೋಬಿ ತಿನ್ನಲು ಹೋಗಿದ್ದ ಬಾಲಕ ಪೋಟೋ ತೆಗೆದು ಮನೆಯವರಿಗೆ ಕಳಿಸಿ ಕಿಡ್ನ್ಯಾಪ್ ಕಥೆ ಕಟ್ಟಿದ್ದ. ಈತನ ಮಾತು ನಂಬಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಕೊನೆಗೂ ಅಸಲಿಯತ್ತು ಗೊತ್ತಾಗಿದೆ.
ಗೋಬಿ, ಐಸ್ ಕ್ರೀಂ ತಿನ್ನಲು ಟ್ಯೂಷನ್ಗೆ ಚಕ್ಕರ್ ಹಾಕಿದ ಬಾಲಕ ಪೋಷಕರಿಗೆ ನಿಜಾಂಶ ಮುಚ್ಚಿಡಲು ತನ್ನನ್ನು ಕಿಡ್ನ್ಯಾಪ್ ಮಾಡಲಾಗಿತ್ತು ಅಂತಾ ಕಥೆ ಹೆಣೆದಿದ್ದ. ಈತನ ಮಾತನ್ನು ನಂಬಿದ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ಬಾಲಕ ಪ್ರತಿದಿನ ಸಂಜೆ ಶಾಲೆ ಮುಗಿಸಿ ಕೋಚಿಂಗ್ ಸೆಂಟರ್ ಒಂದಕ್ಕೆ ಟ್ಯೂಷನ್ಗೆ ಹೋಗುತ್ತಿದ್ದ. ಮನೆಯಲ್ಲಿ ಹಣ ಕದ್ದು ಟ್ಯೂಷನ್ಗೆ ಚಕ್ಕರ್ ಹೊಡೆದು ಗೋಬಿ, ಐಸ್ ಕ್ರೀಂ ತಿನ್ನಲು ಹೋಗಿದ್ದ. ಈತ ಗೋಬಿ ತಿನ್ನುವ ವೇಳೆ ಸಂಬಂಧಿಕರೊಬ್ಬರು ಪೋಟೋ ತೆಗೆದುಕೊಂಡಿದ್ದರು. ಅದನ್ನು ಗಮನಿಸಿದ್ದ ಬಾಲಕ ಎಲ್ಲಿ ತಂದೆ-ತಾಯಿಗೆ ತನ್ನ ವಿಚಾರವನ್ನು ಹೇಳಿ ಬಿಡುತ್ತಾರೆಂದು ಹೆದರಿದ್ದ. ಬಳಿಕ ಪಕ್ಕದ ಮನೆಯ ಮಹಿಳೆಯೊಂದಿಗೆ ಮನೆಗೆ ತೆರಳಿದ ಬಾಲಕ ತನ್ನನ್ನು ಕಿಡ್ನ್ಯಾಪ್ ಮಾಡಲಾಗಿತ್ತು ಅಂತಾ ಕಥೆ ಸೃಷ್ಟಿಸಿ ಪೋಷಕರನ್ನು ನಂಬಿಸಿದ್ದ.
ಬಾಲಕ ಹೆಣೆದಿದ್ದ ಕಥೆ ಏನು?
ನಾನು ಟ್ಯೂಷನ್ ಹೋಗ್ತಿದ್ದ ವೇಳೆ ಯಾರೋ ಅಪರಿಚಿತರು ಬಂದು ತಲೆ ನೋವಾಗುತ್ತಿದೆ ಎಂದು ನಿಮ್ಮ ಟ್ಯೂಷನ್ ಮೇಡಂಗೆ ಹೇಳಿ ವಾಪಾಸ್ ಬಾ ಅಂತ ಹೇಳಿದ್ರು. ನಂತರ ಕಾರಿನಲ್ಲಿ ಕೂರಿಸಿಕೊಂಡು, ಬಾಯಿಗೆ ಪ್ಲಾಸ್ಟರ್ ಹಾಕಿ ಯಾವುದೋ ಒಂದು ಗೋಡೌನ್ ಬಳಿ ಕಾರು ನಿಲ್ಲಿಸಿದರು. ಮತ್ತೆ ಅದೇ ಕಾರಿನಲ್ಲಿ ವಾಪಾಸ್ ತಂದು ಗೋಬಿ ಅಂಗಡಿ ಮುಂದೆ ನಿಲ್ಲಿಸಿ 50 ರೂ. ಕೊಟ್ಟು ಗೋಬಿ, ಐಸ್ ಕ್ರೀ ತಿನ್ನು ಇಲ್ಲದಿದ್ರೆ ಸಾಯಿಸ್ತೀನಿ ಅಂತ ಹೆದರಿಸಿದ್ದರೆಂದು ಬಾಲಕ ಕಥೆ ಕಟ್ಟಿದ್ದಾನೆ.
ಈತನ ಮಾತು ನಂಬಿ ಬೆದರಿದ ಪೋಷಕರು ತಕ್ಷಣ ಪಟ್ಟಣ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಬಾಲಕ ಹೇಳಿದ ಕಥೆಯನ್ನು ಸೀರಿಯಸ್ ಆಗಿ ತೆಗೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಬಾಲಕ ಹೇಳಿದ ಕಡೆಯೆಲ್ಲಾ ಹೋಗಿ ಶೋಧ ನಡೆಸಿ, ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲನೆ ನಡೆಸಿದರು. ಆದರೆ, ಕಿಡ್ನ್ಯಾಪರ್ಸ್ ಸುಳಿವು ಎಲ್ಲಿಯೂ ಸಿಗದೇ ಮತ್ತೆ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆ ವೇಳೆ ಬಾಲಕ ಗೋಬಿಗಾಗಿ ಕಥೆ ಕಟ್ಟಿದ್ದಾನೆ ಅಂತಾ ಗೊತ್ತಾಗಿದೆ.