ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದರಾಮಯ್ಯ ಜಾಗ ಹುಡುಕಾಟ: ಯಡಿಯೂರಪ್ಪ ವ್ಯಂಗ್ಯ

Public TV
2 Min Read

ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನವರು ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ. ಅಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ, ಮುಂದೆ ಗೆಲ್ತೀನಿ ಅನ್ನೋ ವಿಶ್ವಾಸ ಇಲ್ಲದೇನೆ ಬೇರೆ ಜಾಗ ಹುಡುಕುತ್ತಿದ್ದಾರೆ. ನಾನು ಅದಕ್ಕೆ ಟೀಕೆ ಟಿಪ್ಪಣಿ ಮಾಡಲು ಇಷ್ಟ ಪಡಲ್ಲ. ಜನ ಅದನ್ನ ನಿರ್ಧರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ವ್ಯಂಗ್ಯವಾಡಿದ್ದಾರೆ.

ಪತ್ನಿಯ ಹೆಸರಿನ ಕಲ್ಯಾಣ ಮಂಟಪ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮೈತ್ರಾದೇವಿಯವರ ಹೆಸರಿನಲ್ಲಿ ಎಡೆಯೂರಿನಲ್ಲಿ ಬಡವರಿಗೆ, ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು ಅನ್ನೋದು ಬಹಳ ದಿನದ ಕನಸಾಗಿತ್ತು. ಸಾಂಕೇತಿಕವಾಗಿ ಹಣಕೊಟ್ಟು ಬಡವರು ಮದುವೆ (Marriage Hall) ಮಾಡಿಕೊಳ್ಳಲು, ಸಾಮೂಹಿಕ ಕಲ್ಯಾಣವಾಗಲು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ. ಬಡವರಿಗಾಗಿ ಕಟ್ಟಿದ ಈ ಕಲ್ಯಾಣ ಭವನ ವರ್ಷದ 365 ದಿನವೂ ಮದುವೆ ಸಮಾರಂಭ ನಡೆದರೆ ನಮ್ಮ ಸೇವೆ ಸಾರ್ಥಕವಾಗುತ್ತೆ. ಇದರ ಹಿಂಭಾಗದಲ್ಲಿ ಗೆಸ್ಟ್ ಹೌಸ್ ಕಟ್ಟಲು ತೀರ್ಮಾನ ಮಾಡಿದ್ದೇವೆ. ಅದರ ಕಾಮಗಾರಿಯನ್ನ ಕೂಡ ಶ್ರೀಘ್ರವಾಗಿ ಆರಂಭಿಸುತ್ತೇವೆ ಎಂದರು.

ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡ (HD Devegowda) ರಿಗೆ ಆಹ್ವಾನ ನೀಡಿಲ್ಲ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರೋ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಪತ್ರ ಬರೆದು ಸಿಎಂ ಆಹ್ವಾನಿಸಿದ್ದಾರೆ. ಎಸ್.ಎಂ. ಕೃಷ್ಣ ಸೇರಿದಂತೆ ಉಳಿದೆಲ್ಲ ನಾಯಕರು ಬಂದಿದ್ರು. ದೇವೆಗೌಡರಿಗೂ ಪತ್ರ ಬರೆದು ಸಿಎಂ ದೂರವಾಣಿ ಕರೆ ಮಾಡಿಯೂ ಆಹ್ವಾನಿಸಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆಯಾಗ್ತಾ ಇದೆ. ದೇವೇಗೌಡರು ಈ ವಿಚಾರವನ್ನ ವೈಯಕ್ತಿಕವಾಗಿ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸ ನನಗಿದೆ. ಯಾವುದೋ ಕಾರಣಕ್ಕೆ ಅವರಿಗೆ ಬರಲಿಕ್ಕೆ ಆಗಿಲ್ವೇನೋ. ಅದನ್ನ ದೊಡ್ಡದು ಮಾಡೋ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಟಿಪ್ಪು ಪ್ರತಿಮೆ, ಬಸವಣ್ಣ ಪ್ರತಿಮೆ ನಿರ್ಮಾಣ ವಿಚಾರದ ಕುರಿತು ಮಾತನಾಡಿ, ಟಿಪ್ಪು ಪ್ರತಿಮೆ ನಿರ್ಮಿಸುವುದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಏನು ತೀರ್ಮಾನ ಮಾಡುತ್ತೆ ನೋಡೋಣ. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಮುಂದೆ ಮುಖ್ಯಮಂತ್ರಿಗಳು ಅದನ್ನ ಮಾಡ್ತಾರೆ ಎಂದು ತಿಳಿಸಿದರು.

ಇದೇ ವೇಳೆ ಯಡಿಯೂರಪ್ಪ ಹಿಂದೂ ಅಲ್ಲ ಅನ್ನೋ ಬಗ್ಗೆ ಪ್ರತಿಕ್ರಿಯಿಸಿ, ಆ ಹೇಳಿಕೆಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಹಿಂದೂ ಸಮಾಜ ಬಹಳ ದೊಡ್ಡ ಸಮಾಜ. ಮೊದಲು ನಾವೆಲ್ಲರೂ ಹಿಂದೂ, ಆಮೇಲೆ ಜಾತಿ, ಉಪಪಂಗಡಗಳು. ಅನಗತ್ಯವಾಗಿ ಇದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಅನ್ನುವಂತದ್ದು ಒಂದು ದೊಡ್ಡ ಸಮೂಹಕ್ಕೆ ಇರುವಂತಹ ಹೆಸರು. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ. ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಟಿಕೆಟ್ ಕೊಡ್ತೀವಿ ಅಂತಾ ನಾವು ಯಾರಿಗೂ ಭರವಸೆ ನೀಡಿಲ್ಲ. ಪಕ್ಷ ಆ ಬಗ್ಗೆ ತೀರ್ಮಾನ ಮಾಡುತ್ತೆ ಎಂದರು.

ಹಿಂದೂ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆ ಬಗ್ಗೆ ಉತ್ತರಿಸಿದ ಬಿಎಸ್‍ವೈ, ಅದರ ಬಗ್ಗೆ ನಾನು ಏನನ್ನೂ ಹೇಳಲೂ ಇಷ್ಟಪಡಲ್ಲ. ಕಾಂಗ್ರೆಸ್ ನ 90% ನಾಯಕರು ಕೂಡ ನಾವು ಮೊದಲು ಹಿಂದೂಗಳು ಅನ್ನೋದನ್ನ ಒಪ್ಪಿಕೊಳ್ತಾರೆ. ಇದನ್ನ ಅರ್ಥ ಮಾಡಿಕೊಂಡು ಎಲ್ಲರೂ ಮುಂದೆ ಹೋಗಬೇಕು ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *