ಕಲಬುರಗಿ: ತೆಲಂಗಾಣ(Telangana) ಮಾದರಿಯಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯೂ ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಮಾಜಿ ಸಚಿವ ದಿ. ಉಮೇಶ ಕತ್ತಿ ಹಾಗೂ ವೈಜನಾಥ ಪಾಟೀಲ್‌ರ ಭಾವಚಿತ್ರ ಮತ್ತು ಪ್ರತ್ಯೇಕ ರಾಜ್ಯದ ಧ್ವಜ ಹಿಡಿದು ಎಂ.ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ನೂರಾರು ಜನ ಸೇರಿ ಹೋರಾಟ ನಡೆಸಿದರು.
ನಗರದ ಕೋರ್ಟ್ ಮಾರ್ಗವಾಗಿ ಪಟೇಲ್ ವೃತ್ತಕ್ಕೆ ಧ್ವಜಾರೋಹಣ ಮಾಡಲು ಬರುವಾಗ ಮಾರ್ಗಮದ್ಯೆ ಅಡ್ಡಗಟ್ಟಿದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು.
ನಂತರ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೊಳ, ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ 371 ಜೆ ಜಾರಿಯಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಾಗಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಭಾಗದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ಯಾಯ ಮುಂದುವರೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ಹಣ ಪಕ್ಕದ ಜಿಲ್ಲೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ
ಈ ಭಾಗವನ್ನು ಉದ್ಯೋಗ ನೇಮಕಾತಿ, ಮೀಸಲಾತಿ, ಮುಂಬಡ್ತಿ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನದಲ್ಲಿಯೂ ಈ ಭಾಗಕ್ಕೆ ಅನ್ಯಾಯವಾಗಿದೆ. ಪದೆ ಪದೇ ಈ ಭಾಗಕ್ಕೆ ರಾಜ್ಯ ಸರ್ಕಾರ ದ್ರೋಹ ಬಗೆಯುತ್ತಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನೀಡಬೇಕೆದು ಆಗ್ರಹಿಸಿದರು.
ಈ ರಸ್ತೆಯಲ್ಲಿ ಹೋರಾಟಕ್ಕಿಳಿದಿದ್ದೇವೆ. ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಭಿವೃದ್ಧಿಗೆ ಮತ ನೀಡಿ ಎಂದು ಜನತೆಯ ಬಳಿ ತೆರಳುತ್ತೇವೆ. ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದರು.
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ, ಚಂದ್ರಶೇಖರ ಹೀರೆಮಠ ಹುಲ್ಲುರ ಶರಣಗೌಡ ಪೊಲೀಸ್ ಪಾಟೀಲ ನರಿಬೋಳ, ತಾತಾಗೌಡ ಪಾಟೀಲ ಲಕ್ಮೀಕಾಂತ ಸ್ವಾದಿ, ನಂದಕುಮಾರ ನಾಯಕ, ಸಿದ್ದಣ್ಣ ನೀರಲಕೋಡ, ಶಿವಾನಿ, ಲತಾ ಮಹಾದೇವಿ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.

 
			 
		 
		 
                                
                              
		