ಕೊಹ್ಲಿ ಮ್ಯಾಜಿಕ್‌ ಫೀಲ್ಡಿಂಗ್‌, ಶಮಿ ಮಾರಕ ಬೌಲಿಂಗ್‌ – ಭಾರತಕ್ಕೆ 6 ರನ್‌ಗಳ ರೋಚಕ ಜಯ

By
3 Min Read

ಬ್ರಿಸ್ಪೇನ್‌: ಕೊನೆಯಲ್ಲಿ ವಿರಾಟ್‌ ಕೊಹ್ಲಿ (Virat Kohli) ಮ್ಯಾಜಿಕ್‌ ಫೀಲ್ಡಿಂಗ್‌ ಮತ್ತು ಮೊಹಮ್ಮದ್‌ ಶಮಿ (Mohammad Shami) ಅವರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದಿಂದ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ T20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್‌ಗಳ ರೋಚಕ ಜಯ ಸಾಧಿಸಿದೆ.

ಗೆಲ್ಲಲು 187 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ಡೇವಿಡ್‌ ರನೌಟ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ಅವರ ಕ್ಯಾಚನ್ನು ಕೊಹ್ಲಿ ಪಡೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟರು. 9 ರನ್‌ಗಳ ಅಂತರದಲ್ಲಿ 6 ವಿಕೆಟ್‌ ಕಳೆದುಕೊಂಡಿದ್ದರಿಂದ ಭಾರತ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಕೊರೊನಾ ಇದ್ದರೂ T20 ವಿಶ್ವಕಪ್ ಆಡಲು ಆಟಗಾರರಿಗೆ ಅವಕಾಶ!

ಭಾರತ ನೀಡಿದ 187 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಕೊನೆಯ 12 ಎಸೆತಗಳಲ್ಲಿ ಗೆಲುವಿಗೆ 16 ರನ್ ಬೇಕಾಗಿತ್ತು. ಹರ್ಷಲ್ ಪಟೇಲ್ ಎಸೆದ 18 ಓವರ್‌ನ ಮೊದಲ ಎಸೆತದಲ್ಲೇ ಆರನ್ ಫಿಂಚ್ ಬೌಲ್ಡ್ ಆದರು. ಮರು ಎಸೆತದಲ್ಲೇ ಟೀಮ್ ಡೇವಿಡ್ ರನೌಟ್‌ ಆಗಿ ಹೊರ ನಡೆದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. 4 ಎಸೆತದಲ್ಲಿ ಒಂಟಿ ರನ್, 5ನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಎಸೆತದಲ್ಲೂ 1 ರನ್ ಗಳಿಸಿಕೊಂಡ ಆಸ್ಟ್ರೇಲಿಯಾಗೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್ ಬೇಕಾಗಿತ್ತು.

ಶಮಿ ಎಸೆದ ಕೊನೆಯ ಓವರ್‌ನ ಮೊದಲೆರಡು ಎಸೆತದಲ್ಲಿ ತಲಾ ಎರಡೆರಡು ರನ್ ಪ್ರಾಪ್ತಿಯಾಯಿತು. ಮೂರನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಲೈನ್‌ನಲ್ಲಿ ಒಂಟಿ ಕೈಯಲ್ಲಿ ಹಿಡಿದ ಕ್ಯಾಚ್‍ಗೆ ಕಮಿನ್ಸ್ ವಿಕೆಟ್ ಕಳೆದುಕೊಂಡರು. ಮರು ಎಸೆದಲ್ಲಿ ಆಸ್ಟನ್ ಅಗರ್‌ ರನೌಟ್‌ ಆಗಿ ಹೊರನಡೆದರು. ಮರು ಎಸೆದಲ್ಲೂ ಶಮಿ ಬೌಲಿಂಗ್‍ನಲ್ಲಿ ಮಿಂಚಿ ಜೋಸ್ ಇಂಗ್ಲಿಸ್‍ನ್ನು ಬೌಲ್ಡ್ ಮಾಡಿದರು. ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 7 ರನ್ ಬೇಕಾಗಿತ್ತು. ಕೊನೆಯ ಎಸೆತದಲ್ಲಿ ರಿಚರ್ಡ್ಸ್‌ನ್ ಬೌಲ್ಡ್ ಆಗುವ ಮೂಲಕ ರೋಚಕ ಪಂದ್ಯ ಅಂತ್ಯವಾಯಿತು. ಭಾರತ 6 ರನ್‍ಗಳ ಜಯದೊಂದಿಗೆ ಸಂಭ್ರಮಿಸಿತು. ಇದನ್ನೂ ಓದಿ: ರೋಹಿತ್‍ಗೆ ನೆಟ್ಸ್‌ನಲ್ಲಿ ಇನ್‍ಸ್ವಿಂಗ್ ಎಸೆದ ಹನ್ನೊಂದರ ಪೋರ

ಆಸ್ಟ್ರೇಲಿಯಾ ಪರ ಆರನ್ ಫಿಂಚ್ 79 ರನ್ (54 ಎಸೆತ, 7 ಬೌಂಡರಿ, 3 ಸಿಕ್ಸ್) ಚಚ್ಚಿ ಮಿಂಚಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಮಾಕ್ಸ್‌ವೆಲ್‌ 23 ರನ್ (16 ಎಸೆತ, 4 ಬೌಂಡರಿ) ಕಾಣಿಕೆ ಗೆಲುವಿಗೆ ಸಹಕಾರವಾಗಲಿಲ್ಲ.

ಈ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಭಾರತದ ಪರ ಆರಂಭಿಕರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ಅದರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಕ್ಲಾಸಿಕ್ ಆಗಿ ಬ್ಯಾಟ್‍ಬೀಸಿ 57 ರನ್ (33 ಎಸೆತ, 6 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್ ಆದರು. ಇವರ ಹಿಂದೆ ರೋಹಿತ್ 15 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೊದಲು ಈ ಜೋಡಿ ಮೊದಲ ವಿಕೆಟ್‍ಗೆ 78 ರನ್‍ಗಳ ಜೊತೆಯಾಟವಾಡಿದರು.

ಆ ಬಳಿಕ ಬಂದ ಕೊಹ್ಲಿ ಆಟ19 ರನ್ (13 ಎಸೆತ, 1 ಬೌಂಡರಿ, 1 ಸಿಕ್ಸ್)ಗೆ ಅಂತ್ಯವಾಯಿತು. ಆದರೆ ಇನ್ನೊಂದು ಕಡೆ ಸೂರ್ಯಕುಮಾರ್ ತಮ್ಮ ಪ್ರಚಂಡ ಫಾರ್ಮ್ ಮುಂದುವರಿಸಿ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಬೌಂಡರಿ, ಸಿಕ್ಸರ್ ರುಚಿ ತೋರಿಸಿದರು. ಈ ನಡುವೆ ಕಾರ್ತಿಕ್ 20 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಹೊರ ನಡೆದರು. ಕೊನೆಗೆ ಸೂರ್ಯಕುಮಾರ್ ಯಾದವ್ 50 ರನ್‍ಗೆ (33 ಎಸೆತ, 6 ಬೌಂಡರಿ, 1 ಸಿಕ್ಸ್) ಅಂತ್ಯವಾಯಿತು.

ಅಂತಿಮವಾಗಿ ಭಾರತ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 186 ರನ್ ಒಟ್ಟುಗೂಡಿಸಿತು. ಆಸ್ಟ್ರೇಲಿಯಾ ಪರ ಕೇನ್‌ ರಿಚರ್ಡ್ಸ್‌ನ್ 4 ವಿಕೆಟ್ ಕಿತ್ತು ಮಿಂಚಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *