ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

Public TV
2 Min Read

ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ (Puneeth Rajkumar) ಪ್ರಕೃತಿ ಅಂದ್ರೆ ಪ್ರೀತಿ. ಪ್ರಕೃತಿಯನ್ನೇ ಆರಾಧಿಸಿ ಅವರು ನಟಿಸಿರೋ ʻಗಂಧದಗುಡಿʼ (Gandhada Gudi) ಸಿನಿಮಾ ತೆರೆ ಮೇಲೆ ಬರೋಕೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಲ್ಲೂ ಗಂಧದಗುಡಿ ಸದ್ದು ಕೇಳಿಬರುತ್ತಿದೆ. ಇದೇ ಹೊತ್ತಲ್ಲಿ ಅಪ್ಪುವಿನ ನೆನಪಿನಾರ್ಥಕವಾಗಿ ಅಪ್ಪು ಫ್ಯಾನ್ಸ್ ಗಂಧದಗುಡಿ ರೈಡ್ ಹೊರಟಿದ್ದಾರೆ. ಅಲ್ಲದೇ ಅಪ್ಪುವಿನ ಹೆಸರಲ್ಲಿ ಆಲದ ಸಸಿಗಳನ್ನು ನೆಟ್ಟು ಸಮಾಜಮುಖಿ ಕಾಯಕ ಮಾಡಿದ್ದಾರೆ.

ಹೌದು, ಬೆಂಗಳೂರಿನ ಮಲ್ಲೇಶ್ವರಂನಿಂದ ಆವಲಬೆಟ್ಟಕ್ಕೆ ಕಾರು ಹಾಗೂ ಬೈಕ್‌ಗಳ ಮೂಲಕ ಬೆಳ್ಳಂಬೆಳಗ್ಗೆ ರೈಡ್ ಫಾರ್ ಅಪ್ಪು ಅಂತ ಗಂಧದಗುಡಿ ರೈಡ್ ಹೊರಟ ಅಭಿಮಾನಿಗಳಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಚಾಲನೆ ನೀಡಿದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

ಬೆಂಗಳೂರಿನಿಂದ (Bengaluru) ಚಿಕ್ಕಬಳ್ಳಾಪುರ (Chikkaballapura) ಮಾರ್ಗವಾಗಿ ಹೈವೆ 44 ರ ಮೂಲಕ ಅಫ್ಪು ಫ್ಯಾನ್ಸ್ ಆವಲಬೆಟ್ಟಕ್ಕೆ ಆಗಮಿಸಿದರು. ಅಪ್ಪು ನೆನೆಪಿಗಾಗಿ ರೈಡ್ ಅಷ್ಟೇ ಅಲ್ಲದೆ ಆವಲಬೆಟ್ಟದಲ್ಲಿ ಅಪ್ಪು ಹೆಸರಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವರ ಹೆಸರು ಅಜರಾಮರವಾಗುವಂತೆ ಮಾಡಿದರು. ಇಂಚರ ಸ್ಟುಡಿಯೋ, ದ್ವಿಚಕ್ರ ಪ್ರೆಸೆಂಟ್ಸ್ ಸಹಯೋಗದೊಂದಿಗೆ ನೂರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಆಗಮಿಸಿದ ಅಪ್ಪು ಅಭಿಮಾನಿಗಳು, ಅರಣ್ಯ ಇಲಾಖೆಯ ಸಹಕಾರದಿಂದ ಆವಲಬೆಟ್ಟದ ಎರಡು ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟರು.

ಆವಲಬೆಟ್ಟದ ಪ್ರವೇಶದ್ವಾರದ ಬಳಿ ಆಲದ ಸಸಿ ನೆಟ್ಟು ಪೂಜೆ ಪುನಸ್ಕಾರ ಮಾಡಿ ಅಪ್ಪು ಅಂತ ನಾಮಕರಣ ಸಹ ಮಾಡಿದರು. ಬೆಟ್ಟದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟು ಇಡೀ ದಿನ ಆವಲಬೆಟ್ಟದಲ್ಲೇ ಅಪ್ಪು ನೆನಪಿನಾರ್ಥಕವಾಗಿ ಕಾಲ ಕಳೆದು ಅಪ್ಪುವನ್ನ ನೆನೆದರು. ಇನ್ನೂ ಇದೇ ತಿಂಗಳು 29 ಕ್ಕೆ ಅಪ್ಪು ನಮ್ಮನ್ನ ಆಗಲಿ ಒಂದು ವರ್ಷ ಆಗಲಿದ್ದು, ಮುನ್ನಾ ದಿನವೇ ಅಭಿಮಾನಿಗಳಿಗೆ ಅಪ್ಪು ನಟನೆಯ ಗಂಧದಗುಡಿ ಸಿನಿಮಾ ಗಿಫ್ಟ್ ಆಗಿ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪುನೀತ್ ಹೆಸರಿಡಲು ಮನವಿ

ಗಂಧದಗುಡಿ ಸಿನಿಮಾಗೆ ಸ್ವಾಗತ ಕೋರುವುದಕ್ಕೆ ಅಪ್ಪುವನ್ನ ಕಣ್ತುಂಬಿಕೊಳ್ಳೋಕೆ ಈಗಾಗಲೇ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಅಪ್ಪುವಂತೆ ಫ್ಯಾನ್ಸ್ ಕೂಡ ಗಂಧದಗುಡಿ ರೈಡ್ ಹೆಸರಲ್ಲಿ ನೂರಾರು ಆಲದ ಸಸಿ ನೆಟ್ಟು ಇತರರಿಗೂ ಮಾದರಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *