ಕಾಶ್ಮೀರದ ಟಿಟ್ವಾಲ್‍ನಲ್ಲಿ ನೆಲೆ ನಿಲ್ಲಲಿದ್ದಾಳೆ ಶೃಂಗೇರಿ ಶಾರದಾಂಬೆ!

Public TV
2 Min Read

ಚಿಕ್ಕಮಗಳೂರು: ಪಾಕ್ ಆಕ್ರಮಿತ ಪಿ.ಓ.ಕೆಯ ಕಾಶ್ಮೀರದ ಗಡಿಯಲ್ಲಿರುವ ಟಿಟ್ವಾಲ್‍ನಲ್ಲಿ ಕಾಶ್ಮೀರ ಪುರವಾಸಿನ ಶೃಂಗೇರಿ ಶಾರದಾಂಬೆ ನೆಲೆನಿಲ್ಲಲಿದ್ದಾಳೆ. ಈಗಾಗಲೇ ಟಿಟ್ವಾಲ್‍ನಲ್ಲಿ ಕಾಶ್ಮೀರಿ ಪುರವಾಸಿನಿ ಶಾರದಾಂಬೆ ದೇಗುಲದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಕಾಶ್ಮೀರದ ಶಾರದಾ ಪೀಠಕ್ಕೆ ಜಿಲ್ಲೆಯ ಶೃಂಗೇರಿ ಶಾರದಾಂಬೆ (Sringeri Sharadamba) ಸನ್ನಿಧಿಯಿಂದ ಕಾಶ್ಮೀರಿ ಪಂಡಿತರಿಗೆ ಶಾರದಾಂಬೆ ಮೂರ್ತಿಯನ್ನ ಹಸ್ತಾಂತರಿಸಲಾಗಿದೆ.

ಕಾಶ್ಮೀರ (Kashmir) ದ ಗಡಿ ಭಾಗದ ನೀಲಂ ಕಣಿವೆಯ ಟಿಟ್ವಾಲ್‍ (Teetwal) ನಲ್ಲಿ ನಿರ್ಮಾಣವಾಗುತ್ತಿರುವ ಶಾರದಾ ದೇಗುಲಕ್ಕೆ ಮೂರ್ತಿಯನ್ನ ಹಸ್ತಾಂತರಿಸಲಾಗಿದೆ. ವಿಜಯದಶಮಿ ದಿನದಂದು ಶೃಂಗೇರಿ ಗುರುವತ್ರಯರಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳು ಪಂಚಲೋಹದ ಶೃಂಗೇರಿ ಶಾರದಾಂಬೆಯ ಮೂರ್ತಿಯನ್ನ ಕಾಶ್ಮೀರಿ ಪಂಡಿತರಿಗೆ ಹಸ್ತಾಂತರಿಸಿದ್ದಾರೆ. ಕಾಶ್ಮೀರದ ಭಾಗವಾದ ಟಿಟ್ವಾಲ್‍ನಲ್ಲಿ ಪುರಾತನ ಶಾರದಾಂಬೆ ದೇಗುಲ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಮರು ನಿರ್ಮಾಣವಾಗುತ್ತಿದೆ.

ಕಾಶ್ಮೀರಿ ಪಂಡಿತರ ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ್‍ಗೆ ಗುರುವತ್ರಯರು ಮೂರ್ತಿಯನ್ನ ಹಸ್ತಾಂತರಿಸಿದ್ದಾರೆ. ಶಾರದಾಂಬೆ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ನವರಾತ್ರಿ ವೇಳೆಗೆ ಕಾಶ್ಮೀರದಲ್ಲಿ ಶಾರದಾಂಬೆ ದೇಗುಲ ಲೋಕಾರ್ಪಣೆಗೊಳ್ಳಲಿದೆ. ಕಾಶ್ಮೀರದಲ್ಲಿ ನೂತನ ದೇವಾಲಯ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಶಿಲ್ಪಿಗಳಿಗೆ ಭಾಷೆ ಗೊತ್ತಿಲ್ಲ. ನೆಟ್‍ವರ್ಕ್ ಇಲ್ಲ. ತರಕಾರಿ ಸಿಗೋದು ಕಷ್ಟ. ಇಂತಹ ಕಡೆ ಸಮರೋಪಾದಿಯಲ್ಲಿ ಹಗಲಿರುಳೆನ್ನದೆ ನಮ್ಮ ಶಿಲ್ಪಿಗಳು ತಿಂಗಳುಗಳ ಕಾಲ ಶ್ರಮಿಸಿ ಕಲ್ಲಿನ ಕೆಲಸ ಮುಗಿಸಿರೋದು ಹೆಮ್ಮೆಯ ಸಂಗತಿ.

ದೇವಾಲಯದ ಮೇಲ್ಛಾವಣಿ ಕೆಲಸ ಆರಂಭವಾಗಬೇಕಿದ್ದು, ಪ್ರಾಯೋಗಿಕವಾಗಿ ದೇವಾಲಯದ ಮಹಾದ್ವಾರವನ್ನ ಅಳವಡಿಸಲಾಗಿದೆ. ಕಾಶ್ಮೀರದಲ್ಲಿ ಶಿಲಾಮಯ ದೇಗುಲ ಇನ್ನೇನು ಕೆಲವೇ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಲಭ್ಯವಾಗಲಿದೆ. ಪಂಚಲೋಹದಲ್ಲಿ ನಿರ್ಮಾಣವಾಗಿರುವ ಶ್ರೀ ಶಾರದಾ ದೇವಿ ವಿಗ್ರಹವು 100 ಕೆ.ಜಿ ತೂಕವಿದ್ದು, ಬೆಂಗಳೂರಿನ ಶಿಲ್ಪಿಗಳು ಸುಂದರವಾಗಿ ಶಾರದೆಯ ಮೂರ್ತಿಯನ್ನ ನಿರ್ಮಾಣ ಮಾಡಿದ್ದಾರೆ. ಈಗ ಶಾರದೆಯ ಪ್ರತಿರೂಪದ ವಿಗ್ರಹ ಕಾಶ್ಮೀರಕ್ಕೆ ಹೋಗುತ್ತಿದ್ದು, ಶೃಂಗೇರಿಯಲ್ಲಿ ನೆಲೆಯೂರಿರುವ ಶಾರದೆಯ ಮೂಲ ಸ್ಥಾನವೂ ಕಾಶ್ಮೀರನೇ. 1200 ವರ್ಷಗಳ ಹಿಂದೆ ಅದ್ವೈತ ಸಿದ್ಧಾಂತದ ಪ್ರತಿಪಾದಕ ಶ್ರೀ ಶಂಕರಾರ್ಚಾರ್ಯರು ಕಾಶ್ಮೀರದ ಸರ್ವಜ್ಞ ಪೀಠದಿಂದ ಶ್ರೀ ಶಾರದಾಂಬೆಯನ್ನ ಕರೆತಂದು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ್ದರು.

ಇದೀಗ ಶಾರದೆ ಮತ್ತೆ ಕಾಶ್ಮೀರದಲ್ಲಿ ನೆಲೆಯೂರುತ್ತಿರುವುದರಿಂದ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಂತಸಗೊಂಡಿದ್ದಾರೆ. 12 ಶತಮಾನಗಳ ಬಳಿಕ ಶಾರದೆ ಕಾಶ್ಮೀರಕ್ಕೆ ಹೋಗುತ್ತಿರುವುದು ಕರುನಾಡಿಗರಿಗೂ ಸಂತಸ ತಂದಿದೆ. ಭಾರತದ ಮುಕುಟಮಣಿ ಕಾಶ್ಮೀರದಲ್ಲಿ ಅನೇಕ ಐತಿಹಾಸಿಕ ದೇವಾಲಯಗಳಿವೆ. ಅದರಲ್ಲಿ ಶಾರದಾ ಸರ್ವಜ್ಞ ಪೀಠವೂ ಒಂದು. ಅಲ್ಲಿ ವಿಗ್ರಹ ಇಲ್ಲದೇ, ಕೇವಲ ನಾಲ್ಕು ಗೋಡೆಗಳು ಮಾತ್ರ ಇತ್ತು. ಅದೇ ಸ್ಥಳದಲ್ಲಿ ಶಾರದೆಯ ಮರು ಸ್ಥಾಪನೆಯಾಗಬೇಕು ಅಂತ ಉಭಯ ಶ್ರೀಗಳು ಬಯಸಿದ್ದರು. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

ಜಗದ್ಗುರುಗಳ ಇಚ್ಛೆಯಂತೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ರೇಖೆಗೆ ಹೊಂದಿಕೊಂಡಂತಿರುವ ಕಿಶನ್ ಗಂಗಾ ನದಿ ದಡದ ಟ್ವಿಟಾಲ್ ಗ್ರಾಮದಲ್ಲಿ ಶಾರದೆ ನೆಲೆಯೂರಲಿದ್ದು, ಮುಂದಿನ ನವರಾತ್ರಿಯೊಳಗೆ ಕಾಶ್ಮೀರದಲ್ಲಿ ಶಾರದೆ ದೇಗುಲ ಲೋಕಾರ್ಪಣೆಗೊಳ್ಳಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *