ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆಗೆ ಕಸಾಪ ಮುಂದಾಗಿಲ್ಲ: ಮಹೇಶ್‌ ಜೋಶಿ ಸ್ಪಷ್ಟನೆ

Public TV
3 Min Read

ಬೆಂಗಳೂರು: ಪಂಪ ಮಹಾಕವಿ (Pampa Mahakavi) ರಸ್ತೆಯ ಹೆಸರು ಬದಲಾವಣೆಗೆ ಮುಂದಾಗಿಲ್ಲ. ಕೆಲವು ಪೂರ್ವಾಗ್ರಹ ಪೀಡಿತರು, ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಯನ್ನು ಸಹಿಸಲಾಗದೆ, ಇಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ(Mahesh Joshi) ಕಿಡಿಕಾರಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿನ ಪಂಪ ಮಹಾಕವಿ ಮಾರ್ಗವನ್ನು ಕನ್ನಡಮಯ ಮಾಡಬೇಕು ಹಾಗೂ ಆಕರ್ಷಣೀಯವನ್ನಾಗಿಸಲು, ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಮನವಿಯನ್ನು ಮಾತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕನ್ನಡ ಸಾಹಿತ್ಯ ಪರಿಷತ್‌ ನೀಡಿದೆ ಎಂದು ಮಹೇಶ್‌ ಜೋಶಿ ಸ್ಪಷ್ಟನೆ ನೀಡಿದ್ದಾರೆ

ಈ ವಿಚಾರಕ್ಕೆ ಎದ್ದ ಗೊಂದಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.

ಹೇಳಿಕೆಯಲ್ಲಿ ಏನಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಮನವಿಯ ಕುರಿತು ಸ್ಪಷ್ಟ ಮಾಹಿತಿಯಿಲ್ಲದೆ, ಕೆಲವು ಮಾಧ್ಯಮಗಳಲ್ಲಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿಗೆ ಇರುವ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ ಎನ್ನುವ ವರದಿಗಳು ಬಿತ್ತರವಾಗುತ್ತಿವೆ. ವಾಸ್ತವದಲ್ಲಿ ಈ ವಿಷಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಪ್ರಕಟಣೆಯಾಗಲಿ, ಮಾಧ್ಯಮ ಹೇಳಿಕೆಗಳನ್ನಾಗಲಿ ಬಿಡುಗಡೆ ಮಾಡಿರುವುದಿಲ್ಲ. ಕೆಲವರು ದುರುದ್ದೇಶದಿಂದ ಹಾಗೂ ಉದ್ಧೇಶಪೂರ್ವಕವಾಗಿಯೇ ತಪ್ಪು ಗ್ರಹಿಕೆಯಿಂದ ಇಂತಹ ವರದಿಗಳು ಬಿತ್ತರಿಸುತ್ತಿದ್ದಾರೆ.

ಪಂಪ ಮಹಾಕವಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಅಪಾರವಾದ ಗೌರವ ಹೊಂದಿದ್ದು, ಪರಿಷತ್ತಿನ ಕೇಂದ್ರ ಕಚೇರಿ ಇದೇ ರಸ್ತೆಯಲ್ಲಿ ಇರುವುದರಿಂದ, ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಪಡುತ್ತೇವೆ. ಕಳೆದ ಕೆಲವು ದಿನಗಳ ಹಿಂದೆ, ಮಿಂಟೋ ಆಸ್ಪತ್ರೆ ವೃತ್ತದಿಂದ ಮಕ್ಕಳಕೂಟ ವೃತ್ತದವರೆಗಿನ ರಸ್ತೆಯನ್ನು ʻಕನ್ನಡಮಯʼಗೊಳಿಸಬೇಕು, ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಭೂದೃಶ್ಯ(ಲ್ಯಾಂಡ್ಸ್ಕೇಪ್) ಸಿದ್ಧಪಡಿಸಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ ʻಕನ್ನಡಮಯ ವಾತಾವರಣʼ ನಿರ್ಮಾಣ ಮಾಡಬೇಕೆಂಬ ವಿನಂತಿಯನ್ನು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಸಲ್ಲಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಕೆಲವು ಪರಿಷತ್ತಿನ ಅಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳು, ಪಂಪ ಮಹಾಕವಿ ಹೆಸರಿನೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು ಸೇರಿಸಿ ʻಪಂಪ ಮಹಾಕವಿ – ಕನ್ನಡ ಸಾಹಿತ್ಯ ಪರಿಷತ್ತು ರಸ್ತೆʼ ಎಂದು ಅಥವಾ ಆದಿಕವಿ ಪಂಪನಿಗೆ ನಾಡಿನ ಮೊದಲ ಗುರು ʻನಾಡೋಜʼಎಂಬ ಹೆಗ್ಗಳಿಕೆ ಇರುವುದರಿಂದ, ʻನಾಡೋಜ ಪಂಪ ಮಹಾಕವಿ-ಕನ್ನಡ ಸಾಹಿತ್ಯ ಪರಿಷತ್ತು ರಸ್ತೆʼ ಎಂದು ನಾಮಕರಣಕ್ಕೆ ಸಲಹೆ ಕೊಟ್ಟಿರುತ್ತಾರೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಇದರ ಬಗ್ಗೆ ಕೇವಲ ಸಲಹೆ, ಸೂಚನೆಗಳನ್ನು ಆಲಿಸಲಾಗಿದೆಯೇ ಹೊರತು, ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ಟೀಂ ಪ್ರಕಟ – ಬುಮ್ರಾ ಇನ್‌, ಜಡೇಜಾ ಔಟ್‌

ಕೇಂದ್ರದ ವ್ಯಾಪ್ತಿಯಲ್ಲಿ ಬರುವ ದೂರದರ್ಶನವನ್ನು ಕನ್ನಡಮಯ ಮಾಡುವುದರೊಂದಿಗೆ ʻಸಮೀಪ ದರ್ಶನʼವನ್ನಾಗಿಸಿದ್ದು, ಜನರು ನೆನೆಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹ ʻಜನಸಾಮಾನ್ಯರ ಪರಿಷತ್ತುʼ ಮಾಡುವುದಕ್ಕಾಗಿ ನಾಡು ನುಡಿ, ಸಂಸ್ಕೃತಿ ವಿಚಾರದಲ್ಲಿ ಅಪಾರವಾದ ಕಾಳಜಿಯೊಂದಿಗೆ ಕೆಲಸ ಮಾಡುವಲ್ಲಿ ಹೊಸತನವನ್ನು ತರುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಪೂರ್ವಾಗ್ರಹ ಪೀಡಿತರು, ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಯನ್ನು ಸಹಿಸಲಾಗದೆ, ಇಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ. ವಿಕೃತ ಮನಸ್ಸನ್ನು ಹೊಂದಿ, ವಿವಾದ ಸೃಷ್ಟಿಸುವ ಮೂಲಕವೇ, ಪ್ರಚಾರದಲ್ಲಿ ಇರಬೇಕೆಂದು, ದುರದ್ದೇಶ ಹೊಂದಿದವರು ಯಾವಾಗಲೂ ಸಕ್ರಿಯವಾಗಿರುವುದು ದುರಂತ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ದುಡಿಯುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಕರಿಸುವ ಬದಲು, ವಾಸ್ತವವನ್ನು ಅರಿಯದೆ ತಮ್ಮ ಬುದ್ಧಿಗೆ ತಕ್ಕ ವಿಚಾರವನ್ನು ರೂಪಿಸಿಕೊಂಡು, ರಾಜಕೀಯ ಲೇಪ ಮಾಡಿ ಕೊಡುತ್ತಿರುವ ಹೇಳಿಕೆಗಳು ಆಕ್ಷೇಪಾರ್ಹವಾಗಿದೆ. ಕನ್ನಡ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಹತ್ತಾರು ಕನಸುಗಳನ್ನು ಹೊತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾರೇ ಸೂಕ್ತ ಸಲಹೆಗಳನ್ನು ನೀಡಿದರೂ ಮುಕ್ತವಾಗಿ, ಸ್ವೀಕರಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯಾಗಿದೆ. ಯಾವುದೇ ಪರಿಣಾಮಕಾರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುಲು ಪರಿಷತ್ತಿಗೆ ಒಂದು ಕಾನೂನು ಚೌಕಟ್ಟು ಇರುತ್ತದೆ. ʻಕಾರ್ಯಕಾರಿ ಸಮಿತಿʼ ಎನ್ನುವ ಮಹತ್ವದ ವ್ಯವಸ್ಥೆ ಇರುತ್ತದೆ. ಅದರಲ್ಲಿಯೇ ಎಲ್ಲಾ ನಿರ್ಣಯಗಳು ಕೈಗೊಳ್ಳಲಾಗುತ್ತದೆಯೇ ಹೊರತು, ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ, ಎನ್ನುವ ಕಾನೂನಾತ್ಮಕ ತಿಳುವಳಿಕೆಯನ್ನು ಸುಳ್ಳು ಸುದ್ಧಿ ಹಬ್ಬಿಸುತ್ತಿರುವುದನ್ನು ಮೊದಲು ಅರಿತುಕೊಳ್ಳಬೇಕು. ಯಾವುದೇ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುವಾಗ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ಚರ್ಚೆಯ ನಂತರವೇ, ನಿರ್ಣಯ ಕೈಗೊಳ್ಳಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ತಿದ್ದುಪಡಿ ತರುವಾಗ, ವಿದ್ಯಾರ್ಹತೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದು, ಎಲ್ಲರ ಒಪ್ಪಿಗೆಯ ಮೇರೆಗೆ ನಿಬಂಧನೆ ತಿದ್ದುಪಡಿ ಮಾಡಿರುವುದನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಜ್ಞಾಪಿಸುತ್ತಾ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕನ್ನಡಿಗರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *