ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

Public TV
3 Min Read

ಬೆಂಗಳೂರು: ಸಿದ್ದರಾಮಯ್ಯ ಅಮೃತ ಮಹೋತ್ಸವ 75 ಮಾದರಿಯಲ್ಲಿ ಡಿ.ಕೆ.ಶಿವಕುಮಾರ್ ಉತ್ಸವ-23 ಆಚರಿಸುವಂತೆ ಈಗ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಸದಸ್ಯರುಗಳಿಗೆ ಕೆಪಿಸಿಸಿ ಮಾಧ್ಯಮ ಸಂಯೋಜಕರೊಬ್ಬರು ಪತ್ರ ಬರೆದಿದ್ದಾರೆ.

ಮಾಧ್ಯಮ ಸಂಯೋಜಕ ಹಾಗೂ ಡಿ.ಕೆ.ಶಿವಕುಮಾರ್ ಶಿಷ್ಯರಾಗಿರುವ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಜೆಸಿ ರಾಜು ಪತ್ರ ಬರೆದಿದ್ದಾರೆ.

ಜೆ.ಸಿ.ರಾಜು ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದು ಸಿದ್ದರಾಮೋತ್ಸವ ಮಾದರಿಯಲ್ಲೇ 60 ವರ್ಷ ತುಂಬಿದ ಡಿಕೆಶಿಗೆ ʼಶಿವಕುಮಾರೋತ್ಸವʼ ಆಚರಿಸಬೇಕು. ಸಿದ್ದರಾಮೋತ್ಸವ ಸಮಿತಿಯ ಸದಸ್ಯರೆಲ್ಲರೂ ಕಾಂಗ್ರೆಸ್ ನಾಯಕರೇ ಆಗಿರುವುದರಿಂದ ಡಿ.ಕೆ.ಶಿವಕುಮಾರ್ ಉತ್ಸವ 23 ಆಚರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿಯ ಪೂರ್ವ ಭಾವಿ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.

ಪತ್ರದಲ್ಲಿ ಏನಿದೆ?
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತಾವೆಲ್ಲರೂ ಸೇರಿ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಾಡುತ್ತಿರುವುದು ನಮ್ಮ ಪಕ್ಷದ ಹಿರಿಯರಿಂದ ಹಿಡಿದು ನನ್ನಂತಹ ಸಾಮಾನ್ಯ ಕಾರ್ಯಕರ್ತನವರೆಗೆ ಸಂತಸ ತರುವಂತಹ ವಿಚಾರ. ಹಾಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವಂತಹ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದರ ಮುಖಾಂತರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ಸಮಿತಿಯ ಜೊತೆಗೆ ಸಾಮಾನ್ಯ ಕಾರ್ಯಕರ್ತರಾದ ನಾವೂ ಸಹ ಕೈ ಜೋಡಿಸುತ್ತೇವೆ.

ಈ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನನ್ನದೊಂದು ಮನವಿ ಸಲ್ಲಿಸುತ್ತಿದ್ದೇನೆ. ತಾವು ಮಾಡುತ್ತಿರುವ ಸಿದ್ಧರಾಮಯ್ಯ – 75 ಅಮೃತ ಮಹೋತ್ಸವ ಕಾರ್ಯಕ್ರಮದ ರೀತಿಯಲ್ಲಿ, ಚಿಕ್ಕವಯಸ್ಸಿನಿಂದಲೇ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದು ಪಕ್ಷ ಕೊಟ್ಟಂಥ ಜವಾಬ್ದಾರಿಗಳನ್ನು ನಿಭಾಯಿಸಿ ಪಕ್ಷದ ತೀರ್ಮಾನಕ್ಕೆ, ತಲೆಬಾಗಿ ಎಂದೂ ಪಕ್ಷದ ವಿರುದ್ಧ ಮಾತನಾಡದ, ಪಕ್ಷಕ್ಕಾಗಿ ವೈಯಕ್ತಿಕ ತೊಂದರೆಗಳನ್ನು ಅನುಭವಿಸಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿರವರು ಇವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಅಧ್ಯಕ್ಷರ ಇಲ್ಲದ ಕಷ್ಟಕಾಲದಲ್ಲಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿದ ದಿನದಿಂದಲೂ ಹಗಲು ರಾತ್ರಿ ಎನ್ನದೆ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಹುರುವು ಮೂಡಿಸಿ ಪಕ್ಷವನ್ನು ಬಲಪಡಿಸಲು ತನು ಮನ ಧನ ಎಲ್ಲವನ್ನೂ ಪಕ್ಷಕ್ಕಾಗಿ ಅರ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ಅರುವತ್ತು ವರ್ಷ ತುಂಬಿದ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾ‌ರ್‌ ಅವರ ಹೆಸರಿನಲ್ಲಿ ಶಿವಕುಮಾರೋತ್ಸವ – 23 ಎಂಬ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದರ ಮುಖಾಂತರ ಪಕ್ಷ ಮತ್ತು ಕಾರ್ಯಕರ್ತರ ಪರವಾಗಿ ಗೌರವಾರ್ಪಣೆ ಸಲ್ಲಿಸಲು ತಮ್ಮ ಸಮಿತಿಯ ಮುಖಾಂತರವೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಕೈಮುಗಿದು ಕೇಳಿ ಕೊಳ್ಳುತ್ತೇನೆ. ಇದನ್ನೂ ಓದಿ: ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್

ಜುಲೈ 13 ರಂದು ನಡೆಯುವ ಅಮೃತ ಮಹೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತಾವುಗಳು ಶಿವಕುಮಾರೋತ್ಸವ -23 ಕಾರ್ಯಕ್ರಮವನ್ನು ಕೈಗೊಳ್ಳಲು ಪ್ರಸ್ತಾಪ ಮಾಡಬೇಕೆಂದು ಸಮಿತಿಯ ಪದಾಧಿಕಾರಿಗಳಲ್ಲಿ ವಿನಂತಿಸುತ್ತೇನೆ. ಪಕ್ಷಕ್ಕಾಗಿ ದುಡಿದು ಮತ್ತು ರಾಜ್ಯದ ಜನರ ಸೇವೆ ಮಾಡಿದ ಹಿರಿಯರಿಗೆ ಪಕ್ಷದ ಹಿರಿಯರಿಂದ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮಗಳಲ್ಲಿ ನನ್ನಂತಹ ಲಕ್ಷಾಂತರ ಜನ ಕಾರ್ಯಕರ್ತರು ತಮ್ಮ ಸಮಿತಿಯ ಜೊತೆಗಿರುತ್ತೇವೆ. ನಮ್ಮ ಪಕ್ಷದಲ್ಲಿ ನಾಯಕರ ವಿಚಾರ ಬಂದಾಗ ನನ್ನಂತಹ ಸಾಮಾನ್ಯ ಕಾರ್ಯಕರ್ತನ ಮನದಲ್ಲಿ ಪಕ್ಷದ ಎಲ್ಲ ನಾಯಕರಿಗೂ ಸಮಾನವಾದ ಗೌರವವಿದೆ.

ಈ ವಿಚಾರದಲ್ಲಿ ಖಂಡಿತವಾಗಿಯೂ ಗೊಂದಲವಿಲ್ಲ, ಯಾರೂ ಸಹ ಗೊಂದಲ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಸಮಿತಿಯ ಪೂಜ್ಯ ಪದಾಧಿಕಾರಿಗಳು ದಯಮಾಡಿ ನನ್ನ ಮನವಿಯನ್ನು ಪುರಸ್ಕರಿಸಬೇಕು ಎಂದು ತಮ್ಮಲ್ಲಿ ವಿನಮ್ರವಾಗಿ ಬೇಡಿಕೊಳ್ಳುತ್ತೇನೆ. ತಾವುಗಳು ಸಮಿತಿಯ ಪದಾಧಿಕಾರಿಗಳಾಗಿದ್ದರೂ ಸಹ ತಾವೆಲ್ಲರೂ ನನ್ನ ಪಕ್ಷದ ಹಿರಿಯ ನಾಯಕರಾಗಿದ್ದೀರಿ ಹಾಗಾಗಿ ತಮ್ಮಲ್ಲಿ ಕಾರ್ಯಕ್ರಮದ ವಿಚಾರವಾಗಿ ಬೇಡಿ ಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ.

ಇನ್ನು ಪತ್ರದಲ್ಲಿ ಶಿವಕುಮಾರೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿರವರಿಗೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ,ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಗೂ ಮನವಿ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *