ಚಿಕ್ಕಮಗಳೂರು: ತಾಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಎಸ್.ಡಿ.ಆರ್.ಎಫ್. ತಂಡ ಆಗಮಿಸಿದೆ.
ಸೋಮವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ಹೋಗುವಾಗ ಕಾಲು ಕೆಸರಾಯಿತೆಂದು ಹಳ್ಳದಲ್ಲಿ ತೊಳೆದುಕೊಳ್ಳುವ ವೇಳೆ ಆಯಾತಪ್ಪಿ ಬಿದ್ದ ಒಂದನೇ ತರಗತಿ ಬಾಲಕಿ ಸುಪ್ರಿತಾ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ಅಂದಿನಿಂದಲೂ ನಿರಂತರ 40 ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದರೂ ಬಾಲಕಿ ಪತ್ತೆಯಾಗಲಿಲ್ಲ.
ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಈಜು ಪಟುಗಳು 15 ಕಿ.ಮೀ ಉದ್ದದ ಹಳ್ಳದಲ್ಲಿ ಬಾಲಕಿಗಾಗಿ ಹುಡುಕಾಡಿದರು. ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಿಂದ 20 ಜನರ ಎಸ್.ಡಿ.ಆರ್.ಎಫ್. ತಂಡ ಆಗಮಿಸಿದೆ. ಎಸ್.ಡಿ.ಆರ್.ಎಫ್. ತಂಡದ ಜೊತೆ ಉಡುಪಿ ಜಿಲ್ಲೆಯ ಮಲ್ಪೆಯಿಂದ ಮುಳುಗು ತಜ್ಞ ಈಶ್ವರ್ ಕೂಡ ಆಗಮಿಸಿದ್ದಾರೆ. ಇದನ್ನೂ ಓದಿ: ಪಿಯುಸಿ ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಗಿಫ್ಟ್ – ಗೌರವಧನ ಹೆಚ್ಚಳ
ಎಸ್.ಡಿ.ಆರ್.ಎಫ್ ಮುಳುಗುತಜ್ಞರ ಜೊತೆ 35ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ 20ಕ್ಕೂ ಹೆಚ್ಚು ಈಜು ಪಟುಗಳು ಸಾಥ್ ನೀಡಿದ್ದಾರೆ. ಇಂದು ಬಾಲಕಿಯ ಪತ್ತೆಗೆ ಸುಮಾರು 60 ರಿಂದ 70 ಜನ ಕಾರ್ಯಾಚರಣೆಗೆ ಇಳಿದಿದ್ದಾರೆ. ಒಂದು ಸುತ್ತು ಹಳ್ಳ ಹರಿಯುವ ಮಾರ್ಗದಲ್ಲಿ ಹೋಗಿ ಬಂದಿರುವ ಎಸ್.ಡಿ.ಆರ್.ಎಫ್. ತಂಡ ಹಾಗೂ ಮುಳುಗುತಜ್ಞರು ಇದೀಗ ಬಾಲಕಿ ಬಿದ್ದ ಜಾಗದಿಂದ 15 ಕಿ.ಮೀ. ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ – ನೀರಲ್ಲಿ ಕೊಚ್ಚಿ ಹೋದ 1ನೇ ತರಗತಿ ಬಾಲಕಿ