ಆಫ್ಘನ್‌ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ

Public TV
1 Min Read

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಈಚೆಗಷ್ಟೇ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,150ಕ್ಕೆ ಏರಿಕೆಯಾಗಿದೆ. 6.1 ತೀವ್ರತೆಯ ಭೂಕಂಪದಿಂದಾಗಿ ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದು ಸುಮಾರು 3,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 1.18 ಲಕ್ಷ ಮಂದಿ ಮಕ್ಕಳು ಅಪಾಯಕ್ಕೆ ಸಿಲುಕಿದ್ದಾರೆ.

ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯು 770 ಸಾವುಗಳನ್ನು ಅಂದಾಜಿಸಿದೆ. ಆದರೆ ಯುನಿಸೆಫ್ ಅಫ್ಘಾನಿಸ್ತಾನ ಪ್ರತಿನಿಧಿಯು ಸಾವಿನ ಸಂಖ್ಯೆ 1,036 ಎಂದು ಅಂದಾಜಿಸಿದ್ದಾರೆ. ವಿಪತ್ತು ಸಚಿವಾಲಯದ ವಕ್ತಾರ ಮೊಹಮ್ಮದ್ ನಾಸಿಮ್ ಹಕ್ಕಾನಿ 2,000 ಮಂದಿ ಗಾಯಗೊಂಡಿದ್ದು ಸಾವಿರಾರು ಮನೆಗಳು ನಾಶವಾಗಿವೆ ಎಂದು ಆಫ್ಘನ್‌ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಕಟ್ಟಡಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗ್ರಾಮಸ್ಥರು ಕೈಯಿಂದಲೇ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಗಯಾನ್ ಜಿಲ್ಲೆಯಲ್ಲಿ ಕನಿಷ್ಠ 1,000 ಮನೆಗಳಿಗೆ ಹಾನಿಯಾಗಿದ್ದು, ಖೋಸ್ಟ್ ಪ್ರಾಂತ್ಯದ ಸ್ಪೆರೆ ಜಿಲ್ಲೆಯಲ್ಲಿ 800 ಮನೆಗಳು ನೆಲಸಮಗೊಂಡಿವೆ.

ಜರ್ಮನಿ, ನಾರ್ವೆ ಸೇರಿದಂತೆ ಇತರ ದೇಶಗಳು ವಿಶ್ವಸಂಸ್ಥೆಯ ಮೂಲಕ ಅಫ್ಘಾನಿಸ್ತಾನಕ್ಕೆ ಸಹಾಯಹಸ್ತ ಚಾಚುವುದಾಗಿ ಘೋಷಿಸಿವೆ. ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಫಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು ಲಕ್ಷಾಂತರ ಮಕ್ಕಳನ್ನು ಅಪೌಷ್ಟಿಕತೆಯ ಅಪಾಯಕ್ಕೆ ದೂಡಲಿದೆ ಎಂದು ಹೇಳಲಾಗುತ್ತಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *