ದೇವರ ಹೆಸರಲ್ಲಿ ಅರ್ಚಕರಿಂದಲೇ ಭಕ್ತರಿಗೆ ಪಂಗನಾಮ – ಕೋಟಿ ಕೋಟಿ ವಂಚನೆ

Public TV
2 Min Read

ಕಲಬುರಗಿ: ದೇವರು ಎಂದರೆ ಭಯಭಕ್ತಿ ಹೆಚ್ಚು. ಆದರೆ ಇಲ್ಲಿ ಕೆಲ ವಂಚಕರು ಭಯಭಕ್ತಿ ಎಲ್ಲವನ್ನು ಬಿಟ್ಟು ದೇವರ ಹೆಸರಿನಲ್ಲಿಯೇ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದೇವರ ಹೆಸರಿನಲ್ಲಿ ಭಕ್ತರಿಗೆ ವಂಚಿಸಿರುವುದು ಸ್ವತಃ ಅರ್ಚಕರು ಎನ್ನುವುದು ಇಲ್ಲಿ ಬೆಚ್ಚಿಬೀಳಿಸುವ ಸಂಗತಿ.

ಕಲಬುರಗಿ ಜಿಲ್ಲೆ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ಮೂಲೆಮೂಲೆಗಳಲ್ಲಿ ಭಕ್ತರಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗಾಣಗಾಪುರದ ಕೆಲ ಅರ್ಚಕರು ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು, ದೇವರ ಜೊತೆಗೆ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದತ್ತಾತ್ರೇಯ ದೇವಸ್ಥಾನಕ್ಕೆ ಕಲಬುರಗಿ ಡಿಸಿ ಯಶವಂತ್ ಗುರುಕರ್ ಭೇಟಿ ನೀಡಿದ್ದಾಗ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಇದನ್ನೂ ಓದಿ: ಮೈಸೂರು ಆಯ್ತು ಈಗ ಹೈದರಾಬಾದ್‌ ಕರ್ನಾಟಕದತ್ತ ಕಣ್ಣು – ಬಿಜೆಪಿಯಿಂದ ಟಾರ್ಗೆಟ್‌ 25 ಫಿಕ್ಸ್‌

ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com (Shri dattatreya temple.ghanagapur) ಎಂದಿದೆ. ಆದರೆ ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಅರ್ಚಕರೇ 7-8 ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿ ಮಾಡಿದ್ದಾರೆ. ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿ ದೂರದ ಊರಿನಲ್ಲಿಯೇ ಕುಳಿತು ಆನ್‌ಲೈನ್ ಬುಕ್ ಮಾಡುವ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕೆ ಸಲ್ಲಿಸುವ ದಾನವನ್ನು ಕೂಡಾ ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರ ಬೊಕ್ಕಸಕ್ಕೆ ಕೋಟಿ ಕೋಟಿ ವಂಚಿಸಿದ್ದಾರೆ. ದೇವಸ್ಥಾನದ ಹುಂಡಿ ಎಣಿಕೆ ವೇಳೆಯೂ ಮೋಸ ಮಾಡಿರುವಂತೆ ಕಂಡುಬಂದಿದೆ. ಎಣಿಕೆ ವೇಳೆ ಸಿಸಿ ಕ್ಯಾಮೆರಾ ಕಣ್ಣುಗಳನ್ನು ಮುಚ್ಚಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ದೇವಸ್ಥಾನದ ಅಧ್ಯಕ್ಷ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸೂಚನೆ ಮೇರೆಗೆ ದೇವಲಗಾಣಗಾಪುರ ಠಾಣೆಯಲ್ಲಿ ಗಂಗಾಧರ್ ಪೂಜಾರಿ, ಶರತ್ ಭಟ್ ಪೂಜಾರಿ, ವಲ್ಲಭ ಪೂಜಾರಿ, ಅಂಕುರ ಪೂಜಾರಿ, ಪ್ರತಿಕ್ ಪೂಜಾರಿ ಸೇರಿದಂತೆ ಒಟ್ಟು 7 ವಂಚಕರ ಮೇಲೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಇಂದು ಚಾಲನೆ – 3 ದಿನಗಳ ಶೈಕ್ಷಣಿಕ ಮೇಳಕ್ಕೆ ಬನ್ನಿ

ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲೇ ನಕಲಿ ವೆಬ್‌ಸೈಟ್‌ಗಳು ಬಂದ್ ಆಗಿದೆ. ಸುಮಾರು 3-4 ವರ್ಷಗಳಿಂದ ವಂಚನೆ ನಡೆದಿದ್ದು, ದೇವಸ್ಥಾನದಿಂದ ಮುಜರಾಯಿ ಇಲಾಖೆಗೆ ಬರಬೇಕಾದ ಕೋಟ್ಯಂತರ ರೂ. ಆದಾಯ ಖದೀಮರು ನುಂಗಿಹಾಕಿದ್ದಾರೆ. ನಷ್ಟದ ಹಣವನ್ನು ಇವರಿಂದಲೇ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *