ಶಸ್ತ್ರ ಚಿಕಿತ್ಸೆ ಹೊಲಿಗೆ ಬಿಚ್ಚಿಕೊಂಡು ಬಾಣಂತಿಯರ ಪರದಾಟ ಪ್ರಕರಣ – ವೈದ್ಯಾಧಿಕಾರಿಗಳ ವಿರುದ್ಧ FIR

Public TV
1 Min Read

ವಿಜಯಪುರ: ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾದ ಮಹಿಳೆಯರಿಗೆ ಹಾಕಲಾಗಿದ್ದ ಹೊಲಿಗೆ ಬಿಚ್ಚಿ ಸಮಸ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ʼಪಬ್ಲಿಕ್‌ ಟಿವಿʼ ವರದಿಯನ್ನಾಧರಿಸಿ ವೈದ್ಯಾಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಇಲಾಖೆ ಕ್ರಮ ಕೈಗೊಂಡಿದೆ.

ಪಬ್ಲಿಕ್‌ ಟಿವಿ ವರದಿಯನ್ನಾಧಿರಿಸಿ ಕ್ರಮ ಕೈಗೊಂಡಿರುವ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್, ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 U/s 7(2) & 9(3)(a) ನೇದರಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ನೋಟಿಸ್ ಜಾರಿಗೊಳಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ರಾಜಕುಮಾರ ಯರಗಲ್, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಸಂಗಣ್ಣ ಲಕ್ಕಣ್ಣವರ, ಜಿಲ್ಲಾಸ್ಪತ್ರೆ ರೆಸಿಡೆಂಟ್ ಮೆಡಿಕಲ್ ಅಧಿಕಾರಿ ಎ.ಜಿ.ಬಿರಾದಾರ ವಿರುದ್ಧ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?: ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರು ದೊಡ್ಡ ಎಡವಟ್ಟು ಮಾಡಿದ್ದರು. 10 – 15 ದಿನಗಳ ಅಂತರದಲ್ಲಿ 40 ಮಹಿಳೆಯರಿಗೆ ಸಿಜೇರಿಯನ್ ಆಗಿದ್ದು, 25ಕ್ಕೂ ಹೆಚ್ಚು ಮಂದಿಯ ಹೊಲಿಗೆಗಳು ಬಿಚ್ಚಿಕೊಂಡಿತ್ತು. ಇದರಿಂದ ಜಿಲ್ಲಾಸ್ಪತ್ರೆ ಅಂದ್ರೆ ಸಾಕು ಜನರು ಬೆಚ್ಚಿ ಬೀಳ್ತಿದ್ದರು. ಅಲ್ಲಿಯ ಅವ್ಯವಸ್ಥೆ, ವೈದ್ಯರ ಎಡವಟ್ಟುಗಳನ್ನು ಕಂಡು ಜಿಲ್ಲಾಸ್ಪತ್ರೆಗಳಿಗೆ ಹೋಗಲು ಜನ ಭಯ ಪಡುವಂತೆ ಮಾಡಿತ್ತು.

ಶಸ್ತ್ರ ಚಿಕಿತ್ಸೆಯಲ್ಲಿ ಮಾತ್ರವಲ್ಲದೆ ಬಾಣಂತಿಯರಿಗೆ ನೀಡುವ ಇಂಜೆಕ್ಷನ್, ಮಾತ್ರೆ ಸೇರಿದಂತೆ ಸರಿಯಾಗಿ ತಪಾಸಣೆ ಕೂಡ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವಿದ್ದು, ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿ ಮೂರ್ನಾಲ್ಕು ದಿನಗಳು ಕಳೆದರು ಇದುವರೆಗೂ ಅವರಿಗೆ ಮರಳಿ ಹೊಲಿಗೆ ಹಾಕದೆ ವೈದ್ಯರು ಅಸಡ್ಡೆ ತೋರಿದ್ದರು. ವೈದ್ಯರ ಈ ಎಡವಟ್ಟಿನಿಂದ ಬಾಣಂತಿಯರು ಕಣ್ಣೀರಿಡುತ್ತಿದ್ದರು. ಈ ಕುರಿತು ಪಬ್ಲಿಕ್‌ ಟಿವಿ ಗ್ರೌಂಡ್‌ ರಿಪೋರ್ಟ್‌ ಮಾಡಿತ್ತು. ಇದೀಗ ಅವರಿಗೆ ಫಲ ಸಿಕ್ಕಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *