ಹಿಂದೂಗಳ ರಕ್ಷಣೆ ಹೆಸರಲ್ಲಿ ಅಧಿಕಾರಕ್ಕೇರಿ, ಹಿಂದೂ ವಿರೋಧಿ ವರ್ತನೆ ಸರಿಯಲ್ಲ: ಮುತಾಲಿಕ್

Public TV
3 Min Read

ಕಲಬುರಗಿ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿವಾದದ ಬಗ್ಗೆ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಹಿಂದೂಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿರುವುದು ತಪ್ಪು ಎಂದು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಮುತಾಲಿಕ್, ಟಿಪ್ಪು ಸುಲ್ತಾನ್ ಕಾಲದಲ್ಲಿ ಆಂಜನೇಯ ದೇವಸ್ಥಾನ ಒಡೆದು ಜಾಮೀಯಾ ಮಸೀದಿ ನಿರ್ಮಾಣ ಮಾಡಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಈಗಾಗಲೇ ವಿವಾದ ಕೋರ್ಟ್ ಮೇಟ್ಟಿಲೇರಿದೆ. ಆದರೂ ಮಸೀದಿ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಮೈಕ್ ಹಾಕಿ ನಮಾಜ್ ಮಾಡುತ್ತಿರುವುದನ್ನು ತಡೆಯಲು ಸರ್ಕಾರದಿಂದ ಆಗುತ್ತಿಲ್ಲ. ಪುರಾತತ್ತ್ವ ಇಲಾಖೆ ಸುಪರ್ದಿಯಲ್ಲಿ ಇದ್ದರೂ ಅನುಮತಿ ನಿಷೇಧವಿದ್ದರೂ ಒಳಗಡೆ ಅತಿಕ್ರಮ ಪ್ರವೇಶ ಮಾಡಲಾಗುತ್ತಿದೆ. ಏನು ಪುರಾತತ್ವ ಇಲಾಖೆ ಕತ್ತೆ ಕಾಯ್ತಿದೆಯಾ? ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕೂತಿದೆಯಾ? ಪುರಾತತ್ತ್ವ ಇಲಾಖೆಯವರನ್ನು ಸಸ್ಪೆಂಡ್ ಮಾಡಿ ಒದ್ದು ಮನೆಗೆ ಕಳುಹಿಸಿ ಎಂದು ಆಗ್ರಹಿಸಿದರು.

ಎಲ್ಲಿಯವರೆಗೆ ಮದರಸಾ ತೆರವುಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮುಂದುವರೆಯುತ್ತದೆ. 144 ಸೆಕ್ಷನ್ ಹಾಕಿ ಪೂಜೆ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಮೈಕ್ ಹಾಕಿ ನಮಾಜ್ ಮಾಡುವುದನ್ನು ತಡೆಯುವ ತಾಕತ್ ಬಿಜೆಪಿ ಸರ್ಕಾರಕ್ಕೆ ಇಲ್ವಾ? ಹಾಗಾದರೆ ಪುರಾತತ್ತ್ವ ಇಲಾಖೆ ಬೋರ್ಡ್ ಯಾಕೆ ಹಾಕಿದ್ದೀರಿ? ಕಿತ್ತು ಬಿಸಾಕಿ, ಮದರಸಾ ಎಂದು ಘೋಷಿಸಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಯಾರಿಗೆ ಕುಮ್ಮಕ್ಕು ಕೊಡುತ್ತಿದೆ ಎನ್ನುವುದನ್ನು ಯೋಚನೆ ಮಾಡಬೇಕು. ಹಿಂದೂ ಪರವಾಗಿ, ಹಿಂದೂಗಳ ರಕ್ಷಣೆ ಹೆಸರಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಈಗ ಹಿಂದೂ ವಿರೋಧಿಯಾಗಿ ವರ್ತಿಸುತ್ತಿರುವುದು ಸರಿಯಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಬೀದರ್ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್

ಬಸವಕಲ್ಯಾಣ ಮೂಲ ಅನುಭವ ಮಂಟಪ ವಿಚಾರವಾಗಿ ಮಾತನಾಡಿದ ಮುತಾಲಿಕ್, ಮೂಲ ಅನುಭವ ಮಂಟಪ ಪೀರ್ ಪಾಶಾ ಬಂಗ್ಲಾ ನಿಜಾಮ ಆಡಳಿತದಲ್ಲಿ ಅತಿಕ್ರಮಣ ಮಾಡಿದ್ದಾರೆ. ಆದರೆ ಅದು ಮೂಲ ಅನುಭವ ಮಂಟಪ ಎನ್ನುವುದಕ್ಕೆ ಸಾಕಷ್ಟು ದಾಖಲೆ ಇವೆ. ಇಂದು ಮೂಲ ಅನುಭವ ಮಂಟಪದಲ್ಲಿ ಭಾವನೆಯೇ ದೊಡ್ಡ ಅಸ್ತಿ ಆಗಿದೆ. ಈ ತಿಂಗಳು 12 ರಂದು ನಮ್ಮ ನಡೆ ಅನುಭವ ಮಂಟಪ ಕಡೆ ಇದೆ. ಆದರೆ 12 ರಂದು ಆಂದೋಲ ಸ್ವಾಮೀಜಿಗೆ ಮತ್ತು ನನಗೆ ನಿರ್ಬಂಧ ಹೇರಿರುವುದು ಸರ್ಕಾರದ ತಪ್ಪು ನಿಲುವು. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನದಲ್ಲಿ ಪ್ರತಿಭಟಿಸುವ ಹಕ್ಕಿದೆ. ಎಲ್ಲಿ ಬೇಕಾದರೂ ಹೋಗಬಹುದಾದ ಅವಕಾಶವಿದೆ. ನಮ್ಮನ್ನು ಬ್ಯಾನ್ ಮಾಡುವ ಮೂಲಕ ಸರ್ಕಾರ ದೌರ್ಬಲ್ಯವನ್ನು ತೋರಿಸುತ್ತಿದೆ. ಹಿಂದೂ ಪರವಾಗಿ ನಿಲ್ಲಬೇಕಾದ ಬಿಜೆಪಿ ಸರ್ಕಾರ ವಿರೋಧಿ ನೀತಿ ಅನುಸರಿಸುತ್ತಿರುವುದು ಬೇಸರ ತಂದಿದೆ. ಇದನ್ನು ನಾವು ಕೋರ್ಟ್ನಲ್ಲಿ ಸಾಬೀತು ಮಾಡುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಎಷ್ಟೇ ನಿರ್ಬಂಧ ಹೇರಿದ್ರು, ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಅಸಮಾಧಾನ ವ್ಯಕ್ತ ಪಡಿಸಿದ ಮುತಾಲಿಕ್, ಪ್ರತಿಯೊಂದು ಮಸೀದಿಯಲ್ಲಿ ಶಿವಲಿಂಗ ಹುಡುಕುವ ಕೆಲಸ ಮಾಡಬೇಡಿ ಎನ್ನುವುದು ಎಷ್ಟು ಸೂಕ್ತ? ಹಿಂದೂಗಳ ರಕ್ಷಣೆ, ಹಿಂದೂಪರ ದೇವಾಲಯಗಳ ರಕ್ಷಣೆ ಬಗ್ಗೆ ಕಲಿಸಿಕೊಟ್ಟವರೇ ಇಂತಹ ಹೇಳಿಕೆ ನೀಡಿರುವುದು ನೋವು ತಂದಿದೆ. ಅತಿಕ್ರಮ, ಕಾನೂನು ಬಾಹಿರ ದಂಧೆಗಳಿಗೆ ಕಡಿವಾಣ, ಹಿಂದೂಗಳ ರಕ್ಷಣೆ, ಹಿಂದೂ ದೇವಸ್ಥಾನಗಳ ರಕ್ಷಣೆ ಇದನ್ನೇ ಆರ್‌ಎಸ್‌ಎಸ್ ನಮಗೆ ಕಲಿಸಿಕೊಟ್ಟಿದೆ. 26 ವರ್ಷದಿಂದ ನಮಗೆ ನೀಡಿದ ಪಾಠದನ್ವಯ ನಮ್ಮ ಹೋರಾಟ ಮುಂದುವರೆಯಲಿದೆ. ನೀವೆ ಹೇಳಿ ಕೊಟ್ಟಿರುವುದರಿಂದ ಹೋರಾಟ ಪ್ರಾರಂಭ ಮಾಡಿದ್ದೇವೆ. ಬಹಳ ವರ್ಷಗಳ ನಂತರ ಹಿಂದೂಗಳು ಎಚ್ಚೆತ್ತಿದ್ದಾರೆ. ನಮ್ಮನ್ನು ತಡೆಯಬೇಡಿ. ಹಿಂದೂ ದೇವಸ್ಥಾನಗಳ ಪುನರ್ ನಿರ್ಮಾಣ ಮಾಡುವ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಬಂದೂಕು, ಬಾಂಬ್‌ಗಳಿಂದ ತಡೆಯುತ್ತಿಲ್ಲ ಕಾನೂನು ಪ್ರಕಾರವೇ ಹೋರಾಟದ ಮೂಲಕ ರಕ್ಷಣೆ ಮಾಡಿಕೊಳ್ಳುತ್ತೀದ್ದೆವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *