ಚಿಕ್ಕಮಗಳೂರು: ಚಿಕಿತ್ಸೆಗೆಂದು ದಾಖಲಾಗಿದ್ದ ವೇಳೆ ಸರ್ಕಾರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಜಿಲ್ಲೆಯ ಕಡೂರು ಪೊಲೀಸರು ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಬಂಧಿಸಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಧನರಾಜ್‌ನನ್ನು ಕಡೂರು ಪೊಲೀಸರು ಗಾಂಜಾ ಪ್ರಕರಣದಲ್ಲಿ ಬಂಧಿಸಿದ್ದರು. ವಿಚಾರಣಾಧೀನ ಕೈದಿಯಾಗಿದ್ದ ಧನರಾಜ್ ಹೊಟ್ಟೆನೋವು ಎಂಬ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಧನರಾಜ್ ಶೌಚಾಲಯಕ್ಕೆ ಹೋಗಬೇಕೆಂದು ಕೇಳಿಕೊಂಡ.
ಈ ವೇಳೆ ಆಸ್ಪತ್ರೆಯಲ್ಲಿ ಕಾವಲಿಗೆ ಇದ್ದ ಸಿಬ್ಬಂದಿ ಆತನ ಕೈಗಳಿಗೆ ಹಾಕಿದ್ದ ಕೋಳವನ್ನು ಬಿಚ್ಚಿ ಕಳುಹಿಸಿದ್ದರು. ಆರೋಪಿ ಧನರಾಜ್ ಶೌಚಗೃಹಕ್ಕೆ ಹೋಗುವಾಗ ಸಿಬ್ಬಂದಿಯನ್ನು ಅದೇ ಶೌಚಾಲಯದೊಳಕ್ಕೆ ತಳ್ಳಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದನು. ತಪ್ಪಿಸಿಕೊಂಡ ಗಾಂಜಾ ಆರೋಪಿ ಧನರಾಜ್ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದರು. ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಆರೋಪಿ ಧನರಾಜ್ ಇರುವುದನ್ನು ಖಚಿತಪಡಿಸಿಕೊಂಡ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಎರಡು ಹಸುಗಳು ಸಜೀವ ದಹನ
ಆತನ ಬಳಿ ಯಾವುದೇ ಮೊಬೈಲ್ ಇಲ್ಲದಿದ್ದರೂ ಕೂಡ ಆರೋಪಿಯ ಜಾಡು ಹಿಡಿದು 48 ಗಂಟೆಯೊಳಗೆ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಅಕ್ಷಯ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪಿ.ಎಸ್.ಐ. ರಮ್ಯಾ, ಜೈಲು ಸಿಬ್ಬಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜಾರಂದಾಯ ದೈವದ ಪವಾಡ – ಮದುವೆ ಹಾಲ್‍ನಲ್ಲಿ ಕಳ್ಳತನವಾದ ಚಿನ್ನದ ಸರ ಅಚ್ಚರಿಯ ರೀತಿಯಲ್ಲಿ ಪತ್ತೆ