ನಮಗೆ ಯಾವತ್ತೂ ಜನರ ಹಿತ ಮೊದಲು – ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ ಬಳಿಕ ಮೋದಿ ಮಾತು

Public TV
2 Min Read

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ನಮಗೆ ದೇಶದ ಜನರ ಹಿತ ಮೊದಲು ಎಂದಿದ್ದಾರೆ.

ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‍ಗೆ 9.50 ರೂ. ಮತ್ತು ಪ್ರತಿ ಲೀಟರ್ ಡೀಸೆಲ್‍ಗೆ 6 ರೂ. ಕಡಿತಗೊಳಿಸಿದೆ. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ ಬಳಿಕ ಮೋದಿ ರೀಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

ಟ್ವೀಟ್‍ನಲ್ಲಿ ಏನಿದೆ?
ನಮಗೆ ಯಾವತ್ತೂ ಜನರ ಹಿತ ಮೊದಲು. ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಗಮನಾರ್ಹ ಇಳಿಕೆಗೆ ಸಂಬಂಧಿಸಿದ ನಿರ್ಧಾರಗಳು ವಿವಿಧ ಕ್ಷೇತ್ರಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ನಾಗರಿಕರಿಗೆ ಪರಿಹಾರ ಸಿಗುತ್ತಿದ್ದು, ಮತ್ತಷ್ಟು ಜೀವನವನ್ನು ಸುಲಭಗೊಳಿಸಲು ಸಹಾಯವಾಗಿದೆ. ಉಜ್ವಲಾ ಯೋಜನೆಯು ಕೋಟ್ಯಂತರ ಭಾರತೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದೆ. ಉಜ್ವಲಾ ಸಬ್ಸಿಡಿ ಕುರಿತು ನಾವು ತೆಗೆದುಕೊಂಡಿರುವ ನಿರ್ಧಾರವು ಕುಟುಂಬದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದನ್ನೂ ಓದಿ: ಇದು ದುರಹಂಕಾರವಲ್ಲ, ಆತ್ಮವಿಶ್ವಾಸ: ರಾಹುಲ್‌ಗೆ ವಿದೇಶಾಂಗ ಸಚಿವ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಶುಲ್ಕ 8 ರೂ. ಹಾಗೂ ಡೀಸೆಲ್ ಮೇಲಿನ ಅಬಕಾರಿ ಶುಲ್ಕ 6 ರೂ. ಕಡಿತಗೊಳಿಸಿದೆ. ಇದರಿಂದ ಪೆಟ್ರೋಲ್ ದರ 9.50 ರೂ ಹಾಗೂ ಡೀಸೆಲ್ ದರ 7 ರೂಪಾಯಿಯಷ್ಟು ಇಳಿಕೆಯಾಗಿದೆ. ಗೃಹಬಳಕೆಯ ಸಬ್ಸಿಡಿ ಹೊಂದಿರುವ ಅಡುಗೆ ಅನಿಲದ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಇದರಿಂದ ಅಡುಗೆ ಅನಿಲದ ದರ ಇಳಿಕೆಯಾಗಿದ್ದು, ಅದರ ನೇರ ಲಾಭ ಪ್ರತಿ ಕುಟುಂಬಕ್ಕೆ ಸಿಗಲಿದೆ. ಈ ಸಂಬಂಧ ಸಮಸ್ತ ನಾಗರಿಕರ ಪರವಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಬಗ್ಗೆ ವಾಹನಸವಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಸಂತಸ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಏನೋ ದೊಡ್ಡ ಶಾಕ್ ಕೊಡೋಕೆ ಈ ರೀತಿ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲು ಜಾಸ್ತಿ ಮಾಡಿ ಇವಾಗ ಕಡಿಮೆ ಮಾಡಿದ್ರೆ ಏನು ಪ್ರಯೋಜನ? ಮೊದಲಿನಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಬೇಕಾಗಿತ್ತು. ಇವಾಗ ಕಡಿಮೆ ಮಾಡಿದ್ರೆ 100 ರೂಪಾಯಿ ಒಳಗಡೆ ಆದರೆ ಅನುಕೂಲ. ದಿನನಿತ್ಯ ಬಳಸುವ ವಸ್ತುಗಳ ಬೆಲೆ ಕೂಡ ಕಡಿಮೆ ಆಗಬೇಕು ಆಗ ಬಡ ಜನರಿಗೆ ಅನುಕೂಲ. ಇವಾಗ ಕಡಿಮೆ ಮಾಡಿ ಸ್ವಲ್ಪ ದಿನಕ್ಕೆ ಜಾಸ್ತಿ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *