ಭಾರೀ ಮಳೆಗೆ ಮುಳುಗಿದ ರಾಜಧಾನಿ – ಪೂಲ್‌ನಲ್ಲಿ ಈಜಾಡಲು ಬನ್ನಿ ಬೊಮ್ಮಾಯಿಯವರೇ ಎಂದ ಯುವಕ

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ರಾತ್ರಿ ಸುರಿದ ಭಾರೀ ಮಳೆಗೆ ರಾಜಧಾನಿ ತೊಯ್ದು ತೊಪ್ಪೆಯಾಗಿದೆ. ರಾಜಧಾನಿಯ ತಗ್ಗು ಪ್ರದೇಶಗಳು ಜಲಾವೃತಗೊಂಡರೆ, ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಇಲ್ಲಿನ ವಿಜಯನಗರ, ತ್ಯಾಗರಾಜನಗರ, ಆರ್‌ಆರ್ ನಗರದ ಕೆಂಚೇನಹಳ್ಳಿ, ತಿಗಳರಪಾಳ್ಯ, ನಾಗರಬಾವಿ, ಭದ್ರಪ್ಪ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಹಾಳಾಗಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು ಸಹಿತ, ಭಾರೀ ಮಳೆ- ತಗ್ಗುಪ್ರದೇಶಗಳೆಲ್ಲ ನೀರುಮಯ, ಸವಾರರ ಪರದಾಟ

RAIN 01

ಶಾಂತಿನಗರ, ನಾಗರಬಾವಿ, ಎಚ್‌ಎಎಲ್, ರಾಜ್‌ಕುಮಾರ್ ರಸ್ತೆ, ಕಲ್ಯಾಣನಗರ ಬಡಾವಣೆಗಳಲ್ಲಿ ರಸ್ತೆಗಳಿಗೆ ನೀರು ಹರಿದು ನದಿಗಳಂತಾಗಿವೆ. ಮಳೆ ನೀರಿನಲ್ಲಿ ಬೈಕ್‌ಗಳು ಕೊಚ್ಚಿ ಹೋಗಿವೆ. ನಾಯಂಡಹಳ್ಳಿ ಜಂಕ್ಷನ್ ಮಿನಿ ಕೆರೆಯಂತಾಗಿದ್ದು, ಕಾರುಗಳು ನೀರಿನಲ್ಲಿ ಮುಳುಗಿದ್ದವು. ಇದೇ ವೇಳೆ ರಸ್ತೆಯಲ್ಲೇ ಜಲಾವೃತ್ತಗೊಂಡಿದ್ದ ನೀರಿನ ಬಳಿ ನಿಂತ ಯುವಕರು ಸರ್ಕಾರ ಕಟ್ಟಿಸಿರೋ ಸ್ವಿಮ್ಮಿಂಗ್ ಪೂಲ್.. ಬನ್ನಿ ಈಜಾಡಿ ಎಂದು ವ್ಯಂಗ್ಯವಾಡುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದಿತು. ಇದನ್ನೂ ಓದಿ: ಬಸವೇಶ್ವರ ಮೂರ್ತಿಗೆ ಮುಸ್ಲಿಂರಿಂದ ಸ್ವಾಗತ

ಇನ್ನು ಯಶವಂತಪುರ ಬಸ್ ನಿಲ್ದಾಣ ಜಲಮಯವಾಗಿದ್ದರೆ, ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಜಲಪಾತವೇ ಸೃಷ್ಟಿಯಾಗಿತ್ತು. ಡಾಲರ್ಸ್ ಕಾಲೋನಿಯಲ್ಲಿ ಉದ್ಯಮಿಗಳ ಮನೆಗಳಿಗೂ ಚರಂಡಿ ಎಂಟ್ರಿಕೊಟ್ಟಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಚರಂಡಿ ನೀರು ನುಗ್ಗಿ ಐಷಾರಾಮಿ ಕಾರುಗಳು ಮುಳುಗಿದ್ದವು. ಲಹರಿ ಸಂಸ್ಥೆಯ ವೇಲು ನಿವಾಸದ ಅಂಡರ್‌ಪಾಸ್ ಸಹ ಸಂಪೂರ್ಣ ಜಲಾವೃತವಾಗಿತ್ತು. ವೈಯ್ಯಾಲಿಕಾವಲ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಲಮಂಡಳಿ ಕಾಮಗಾರಿ ನಡೆಸಿತ್ತು. ಆದ್ರೆ ಸರಿಯಾಗಿ ಗುಂಡಿ ಮುಚ್ಚಿರಲಿಲ್ಲ. ಪರಿಣಾಮ ಜೋರು ಮಳೆಯಿಂದಾಗಿ ಗುಂಡಿ ಮತ್ತಷ್ಟು ದೊಡ್ಡದಾಗಿ ಪೊಲೀಸ್ ಜೀಪ್ ಹಳ್ಳದಲ್ಲಿ ಸಿಲುಕಿತ್ತು. ಮುಂಜಾನೆಯೂ ಸೋನೆಯ ಮಳೆಯ ನಡುವೆ ಜನರು ತಮ್ಮ ಮನೆ, ಆವರಣಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಮಳೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಮೈಸೂರು, ಮಂಡ್ಯ, ಕೊಪ್ಪಳ, ಬೀದರ್, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

ಎಲ್ಲಿ, ಏನು ಅನಾಹುತ?: ಯಾದಗಿರಿ ಜಿಲ್ಲೆಯ ಮಂಗಿಹಾಳ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಕುರಿಗಾಹಿ ಮೃತಪಟ್ಟಿದ್ದಾನೆ. ಹೋನಗೇರಾ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಚಾಮರಾಜನಗರದ ಹನೂರು ತಾಲ್ಲೂಕಿನ ಮಂಚಾಪುರ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ 3 ಹಸುಗಳು ಸಾವಿಗೀಡಾಗಿವೆ. ವಿಜಯಪುರದಲ್ಲಿ ಸಿಡಿಲು ಬಡಿದು 14 ಕುರಿಗಳು ಮೃತಪಟ್ಟಿವೆ.

Rain

ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶದದಲ್ಲಿ ಮೋಡಗಳು ಆವರಿಸಿದ ನಯನ ಮನೋಹರ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.

ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಪರಿಣಾಮ ಮುಂಗಾರು ಬಿರುಸುಗೊಂಡಿದೆ. ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 3-4 ದಿನ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮೇ 21ರ ವರೆಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *