ಮತಾಂತರ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯದವರು ಭಯ ಬೀಳೋದು ಯಾಕೆ: ಆರಗ ಜ್ಞಾನೇಂದ್ರ

Public TV
2 Min Read

ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮತಾಂತರ ಕಾಯ್ದೆ ಬಗ್ಗೆ ಕ್ರಿಶ್ಚಿಯನ್ ಸಮುದಾಯದವರು ಯಾಕೆ ಭಯ ಬೀಳಬೇಕು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ.

ಮತಾಂತರ ಕಾಯ್ದೆ ಸುಗ್ರೀವಾಜ್ಞೆ ವಿರೋಧಿಸಿ ಕ್ರಿಶ್ಚಿಯನ್ ಧರ್ಮಗುರುಗಳು ರಾಜ್ಯಪಾಲರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಯ್ದೆ ಬಗ್ಗೆ ಯಾರಿಗೂ ಆತಂಕ ಬೇಡ. ಮುಸ್ಲಿಮರು ಕ್ರಿಶ್ಚಿಯನರಿಗೆ ಸಂವಿಧಾನದಲ್ಲಿ ಬದುಕಲು ಅವಕಾಶ ಕೊಡಲಾಗಿದೆ. ಇದಕ್ಕೆ ಯಾವುದೇ ಧಕ್ಕೆ ಕಾಯ್ದೆಯಿಂದ ಆಗುವುದಿಲ್ಲ ಅಂತ ಸ್ಪಷ್ಟಪಡಿಸಿದರು. ಬಲವಂತ ಮತಾಂತರಕ್ಕೆ ಮಾತ್ರ ಶಿಕ್ಷೆ ಕೊಡುವ ಕೆಲಸ ನಾವು ಮಾಡಿದ್ದೇವೆ. ಕ್ರಿಶ್ಚಿಯನ್ ಧರ್ಮ ಗುರುಗಳು ಯಾಕೆ ಆತಂಕ ಪಡುತ್ತಾರೆ ಗೊತ್ತಿಲ್ಲ. ಕಾಯ್ದೆಯಲ್ಲಿ ಏನಾದರೂ ತೊಂದರೆ ಇದ್ದರೆ ಹೇಳಲಿ ಅಂತ ತಿಳಿಸಿದರು.

ಧಾರ್ಮಿಕ ಆಚರಣೆಗೆ ಮತಾಂತರ ಕಾಯ್ದೆಯಲ್ಲಿ ವಿರೋಧ ಮಾಡಿಲ್ಲ. ಪ್ರಾರ್ಥನೆ ಮಾಡಬಹುದು, ಮಸೀದಿಯಲ್ಲಿ ನಮಾಜ್ ಕೂಡಾ ಮಾಡಬಹುದು. ಆಮಿಷವೊಡ್ಡಿ ಮತಾಂತರ ಮಾಡುವವರಿಗೆ ಕಾಯ್ದೆ ಜಾರಿ ಮಾಡಿದ್ದೇವೆ. ಅಷ್ಟೇ ಅಲ್ಲ ಮತಾಂತರ ಆಗುವವರಿಗೆ ಸರ್ಕಾರದ ಸವಲತ್ತುಗಳನ್ನು ನಿಲ್ಲಿಸುತ್ತಿದ್ದೇವೆ ಅಷ್ಟೇ ಅಂತ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಓವೈಸಿ, ಮುಫ್ತಿ ಮತ್ತೊಮ್ಮೆ ಇತಿಹಾಸ ಓದಲಿ: ಕೇಂದ್ರ ಸಚಿವೆ

ಅನೇಕ ಜನರನ್ನು ಮತಾಂತರ ಮಾಡುತ್ತಿದ್ದಾರೆ ಅಂತ ನಮಗೆ ದೂರುಗಳು ಬಂದಿತ್ತು. ಶಾಸಕರೇ ತಮ್ಮ ತಾಯಿ ಮತಾಂತರ ಆಗಿರುವ ಬಗ್ಗೆ ಮಾತಾಡಿದ್ದರು. ಸಿದ್ದರಾಮಯ್ಯ ಕಾಲದಲ್ಲಿ ಇದ್ದ ಕಾಯ್ದೆಯನ್ನು ನಾವು ಜಾರಿ ಮಾಡಿದ್ದೇವೆ. ನಾವು ಬೇರೆ ಕಾಯ್ದೆ ತಂದಿಲ್ಲ. ಸಿದ್ದರಾಮಯ್ಯ ಅವರೇ ಸಹಿ ಹಾಕಿದ್ದರು. ಅದನ್ನು ಜಾರಿ ಮಾಡಿದ್ದೇವೆ ಅಂತ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ಕುಸಿಯಿತು ರಸ್ತೆ

SIDDARAMAIAH

ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿತ್ತು. ಈಗ ಯಾವುದೇ ಅಧಿವೇಶನ ಇಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಬಿಲ್ ಪರಿಷತ್‍ನಲ್ಲಿ ಪಾಸ್ ಮಾಡಿಕೊಳ್ಳುತ್ತೇವೆ ಅಂತ ತಿಳಿಸಿದರು. ಮತಾಂತರ ಬಿಲ್ ನಾವು ಕದ್ದು, ಮುಚ್ಚಿ ಕಾಯ್ದೆ ತಂದಿಲ್ಲ. ನಾವು ಅಧಿಕಾರಕ್ಕೆ ಬಂದರೆ ಕಾಯ್ದೆ ತರುವುದಾಗಿ ಹೇಳಿದ್ದೆವು. ನಾವು ಹೇಳಿದಂತೆ ಈ ಕಾಯ್ದೆಯನ್ನು ತಂದಿದ್ದೇವೆ ಅಂತ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *