ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

Public TV
2 Min Read

ಬ್ಯಾಂಕಾಕ್‌: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ (Thomas Cup 2022 final) ಫೈನಲ್‌ಗೆ ಮೊದಲ ಬಾರಿ ಪ್ರವೇಶ ಪಡೆದ ಭಾರತದ ಪುರುಷರ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಇಂಡೋನೇಷ್ಯಾದ ವಿರುದ್ಧ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಇತಿಹಾಸವನ್ನು ಸೃಷ್ಟಿಸಿದೆ.

43 ವರ್ಷಗಳಿಂದಲೂ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡಿದೆ. ಅದು 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾದ ವಿರುದ್ಧ ಗೆದ್ದು ಈ ಸಾಧನೆ ಮಾಡಿದೆ ಎನ್ನುವುದು ವಿಶೇಷ. ಈ ಮೂಲಕ ಥಾಮಸ್‌ ಕಪ್‌ ಗೆದ್ದ 6ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಹಿಂದೆ 1979ರಲ್ಲಿ ಕಂಚಿನ ಪದಕ ಗೆದ್ದಿದ್ದೇ ಈವರೆಗೆ ಟೂರ್ನಿಯಲ್ಲಿ ಭಾರತದ ಶ್ರೇಷ್ಠ ಸಾಧನೆ ಎನಿಸಿತ್ತು.

ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಲಕ್ಷ್ಯ ಸೆನ್‌ ಜಿಂಟಿಂಗ್ ವಿರುದ್ಧ ಜಯಗಳಿಸಿದರು. ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಜಿಂಟಿಗ್‌ ಮೊದಲ ಪಂದ್ಯವನ್ನು 8-21 ರಿಂದ ಗೆದ್ದುಕೊಂಡರೂ ಲಕ್ಷ್ಯ ಸೆನ್‌ ನಂತರ ಎರಡು ಪಂದ್ಯವನ್ನು 21-17, 21-16 ಗೇಮ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತಕ್ಕೆ ಮೊದಲ ಮುನ್ನಡೆಯನ್ನು ತಂದುಕೊಟ್ಟರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್  ಸುಕಮುಲ್ಜೊ ಜೊತೆ ಮೊದಲ ಪಂದ್ಯವನ್ನು 18-21 ರಿಂದ ಸೋತಿದ್ದರೂ ನಂತರ 23-21, 21-19 ಗೇಮ್‌ಗಳಿಂದ ಗೆಲ್ಲುವ ಮೂಲಕ ಗೆಲುವಿನ ಸಮೀಪ ತಂದರು.

ಮೂರನೇ ಪಂದ್ಯದಲ್ಲಿ ಶ್ರೀಕಾಂತ್‌ ಕಿಡಂಬಿ ಅವರು ಜೊನಾಟನ್ ಕ್ರಿಸ್ಟಿ ಅವರ ವಿರುದ್ಧ 21-15, 23-21 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಭಾರತಕ್ಕೆ ಟ್ರೋಫಿಯನ್ನು ಗೆದ್ದುಕೊಟ್ಟರು.  ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

ಲೀಗ್‌ ಹಂತದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ಬಳಿಕ ಕೊರಿಯಾ ವಿರುದ್ಧ ಪರಾಭವಗೊಂಡಿತ್ತು. ಆದರೆ ಕ್ವಾರ್ಟರ್‌ ಫೈನಲ್‌ ಹಾಗೂ ಸೆಮೀಸ್‌ನಲ್ಲಿ ಕ್ರಮವಾಗಿ ಮಲೇಷ್ಯಾ ಮತ್ತು ಡೆನ್ಮಾರ್ಕ್‌ಗೆ ಸೋಲುಣಿಸಿತ್ತು. ಮತ್ತೊಂದೆಡೆ ದಾಖಲೆಯ 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾ ಲೀಗ್‌ನಲ್ಲಿ ಅಜೇಯವಾಗಿ ಉಳಿದಿದ್ದು, ನಾಕೌಟ್‌ನಲ್ಲಿ ಚೀನಾ ಮತ್ತು ಜಪಾನ್‌ ವಿರುದ್ಧ ಗೆದ್ದಿತ್ತು.

Share This Article
Leave a Comment

Leave a Reply

Your email address will not be published. Required fields are marked *