ಭಾರತ ಹಾಕಿ ತಂಡದಲ್ಲಿ ಹಾಸನದ ಶೇಷೇಗೌಡ

Public TV
2 Min Read

ಹಾಸನ: ಜಾವಗಲ್ ಶ್ರೀನಾಥ್, ಡೇವಿಡ್ ಜಾನ್ಸನ್‍ರಂತಹ ಪ್ರತಿಭೆಗಳು ಭಾರತದ ಕ್ರಿಕೆಟ್ ತಂಡದಲ್ಲಿ ಆಡಿ ಜಿಲ್ಲೆಗೆ ಕೀರ್ತಿ ತಂದಿದ್ದು ಇತಿಹಾಸ. ಈಗ ಹಾಕಿ ಕ್ರೀಡೆಯಲ್ಲಿಯೂ ಅಂತದ್ದೇ ಸಂಭ್ರಮ ದಿನಗಳು ಪ್ರಾರಂಭಗೊಡಿವೆ.

ಹೌದು ಹಾಸನ ನಗರದ ಬೀರನ ಹಳ್ಳಿಕೆರೆಯ ಪ್ರತಿಭೆ ಶೇಷೇಗೌಡ ಮೇ 23 ರಿಂದ ಜೂನ್ 1 ರವರೆಗೆ ಇಂಡೋನೇಷಿಯಾದ ಜಕಾರ್ತಾದಲ್ಲಿ ನಡೆಯುವ ಏಷ್ಯನ್ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸಲು ರಾಷ್ಟ್ರೀಯ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಜಿಲ್ಲೆಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಲ್ಯದಲ್ಲೆ ನಿರೀಕ್ಷೆ ಮೂಡಿಸಿದ್ದ ಹುಡುಗ: ಈ ಹುಡಗ ಪ್ರತಿಭಾವಂತ, ಅದ್ಬುತ ಆಟಗಾರ, ಒಂದಲ್ಲ ಒಂದು ದಿನ ದೇಶಕ್ಕಾಗಿ ಆಟ ಆಡೇ ಆಡುತ್ತಾನೆ. ಹೀಗಂತ ಹಾಕಿ ತರಬೇತುದಾರರಾದ ರವೀಶ್, ಹಿರಿಯ ಆಟಗಾರರಾದ ಮಧು, ತಾರನಾಥ್ ಪದೇ ಪದೇ ಹೇಳುತ್ತಿದ್ದರು. ಅವರ ಆತ್ಮವಿಶ್ವಾಸಕ್ಕೆ ಇಂಬು ನೀಡುವಂತೆ ಆ ಯುವಕ ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ತಂಡದ ಆಯ್ಕೆ ಕ್ಯಾಂಪ್ ಸೇರಿ ಸುದ್ದಿ ಮಾಡಿದ್ದ. ನಿರೀಕ್ಷೆ ಹುಸಿಯಾಗಲಿಲ್ಲ ಶೇಷೇಗೌಡರವರು ಈಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶೇಷೇಗೌಡರ ಈವರೆಗಿನ ಕ್ರೀಡಾ ಸಾಧನೆ: ಸೀನಿಯರ್ ರಾಷ್ಟ್ರೀಯ ಕ್ರೀಡಕೂಟ 2017 ಮತ್ತು 2019ರಲ್ಲಿ ಚಿನ್ನ, 2021ರಲ್ಲಿ ಬೆಳ್ಳಿ, 2018ರಲ್ಲಿ ಕಂಚಿನ ಪದಕ ಗೆದ್ದಿರುವ ಶೇಷೆಗೌಡ, 2014ರಲ್ಲಿ ಆಲ್ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಚಿನ್ನ, 2011ರಲ್ಲಿ ನಡೆದ 17 ವರ್ಷದೊಳಗಿನ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಬಡತನದಲ್ಲಿ ಅರಳಿದ ಪ್ರತಿಭೆ: ಹಾಸನ ನಗರದ ಬೀರನಹಳ್ಳಿಯ ಕೆರೆಯ ರಾಘವೇಂದ್ರ ಕಾಲೋನಿಯ, ಗಾರೆ ಕೆಲಸ ಮಾಡುವ ಕಡು ಬಡಕುಟುಂಬದ ಮಹೇಶ್ ಹಾಗೂ ಅಡುಗೆ ಕೆಲಸದ ಕಮಲ ದಂಪತಿಯ ಮಗ ಶೇಷೇಗೌಡ. ಬಾಲ್ಯದಿಂದಲೇ ಹಾಕಿ ಆಟವನ್ನು ತನ್ನ ಉಸಿರಾಗಿಸಿಕೊಂಡು ಬೆಳೆದ ಬಾಲಕ, ತಂಗಿ ಕೋಮಲ ಕೂಡ ಹಾಕಿ ಆಟಗಾರರಾಗಿದ್ದು, ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಾಯಿ ಕ್ರೀಡಾ ಹಾಸ್ಟೆಲ್‍ನಲ್ಲಿ ಹಾಕಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಣ್ಣನ ಸಾಧನೆಗೆ ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

ಆಗಿನ್ನೂ ಕ್ರೀಡಾ ಹಾಸ್ಟೆಲ್ ಇಲ್ಲದ ದಿನಗಳು: 4ನೇ ತರಗತಿಯಲ್ಲಿಯೇ ಕ್ರೀಡಾಂಗಣಕ್ಕೆ ಬರುತಿದ್ದ ಬಾಲಕನ ಪ್ರತಿಭೆ ಗುರುತಿಸಿದ್ದ ತರಬೇತುದಾರರಾದ ರವೀಶ್, ಶೇಷೇಗೌಡರಿಗೆ ತರಬೇತಿ ನೀಡಿ ಕೊಡಗು ಜಿಲ್ಲೆಯ ಕ್ರೀಡಾ ವಸತಿ ಶಾಲೆಗೆ ಕಳುಹಿಸಲು ದಾರಿ ತೋರಿದರು.

ನಂತರ ಪ್ರಥಮ ಪಿಯುಸಿಯಿಂದ ಪದವಿವರೆಗೆ ಬೆಂಗಳೂರಿನ ಕ್ರೀಡಾ ಶಾಲಾ ವಸತಿ ನಿಲಯದಲ್ಲಿ ಇದ್ದು ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡಿದ ಶೇಷೇಗೌಡರಿಗೆ, ರೈಲ್ವೆ ಇಲಾಖೆಯು ಕೈ ಬೀಸಿ ಕರೆದು, ಚೆಕಿಂಗ್ ಇನ್ಸ್‍ಪೆಕ್ಟರ್ ಹುದ್ದೆ ನೀಡಿತ್ತು. ಸರ್ಕಾರಿ ಉದ್ಯೋಗ ಸಿಕ್ಕಿತು ಸಾಕೆಂದು ಶೇಷೆಗೌಡ ವಿಶ್ರಮಿಸಲಿಲ್ಲ, ವೈಯಕ್ತಿಕ ಮೋಜಿಗೆ ಮನಸ್ಸು ಮಾಡಲಿಲ್ಲ. ರೈಲ್ವೇಸ್ ತಂಡಕ್ಕೆ ಆಡುತ್ತಾ, ದಣಿವರಿಯದಂತೆ ನಿರಂತರವಾಗಿ ಅಭ್ಯಾಸ ಮಾಡಿದರು. ಭಾರತ ಜರ್ಸಿ ಹಾಕಿ ಆಡುವ ಕನಸು ಕಾಣುತ್ತಾ ನನಸಾಗಿಸಲು ಬೆವರು ಹರಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ: ಜೆಪಿ ನಡ್ಡಾ

ಅದರ ಫಲವಾಗಿ ಕಳೆದ ಆರು ತಿಂಗಳಿನಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತಂಡದ ಆಯ್ಕೆ ಕ್ಯಾಂಪ್‍ನಲ್ಲಿ ಪಾಲ್ಗೊಂಡಿರುವ ಶೇಷೇಗೌಡ, ತಮ್ಮ ಕೌಶಲ್ಯದಿಂದಲೇ ಆಯ್ಕೆಗಾರರ ಗಮನ ಸೆಳೆದರು. ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಒಟ್ಟಾರೆಯಾಗಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹಾಕಿ ತಂಡಕ್ಕೆ ಜಿಲ್ಲೆಯ ಪ್ರತಿಭೆ ಆಯ್ಕೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *