ಕೆಕೆಆರ್ ವಿರುದ್ಧ 75 ರನ್‍ಗಳ ಜಯ – ಅಂಕಪಟ್ಟಿಯಲ್ಲಿ ಲಕ್ನೋ ಟಾಪ್

Public TV
2 Min Read

ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಸ್ಟನ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವಿಗೆ 75 ರನ್ ಬೇಕಿರುವಾಗಲೇ ಅಲೌಟ್ ಆಗಿ ಹೀನಾಯ ಸೋಲನುಭವಿಸಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್‍ಗಳ ಸವಾಲಿನ ಗುರಿ ನೀಡಿತ್ತು.

ಕೆ.ಎಲ್ ರಾಹುಲ್ ಪಡೆಗೆ ಆರಂಭಿಕ ಆಘಾತ ಎದುರಾಗಿತ್ತು. ನಾಯಕ ಕೆ.ಎಲ್. ರಾಹುಲ್ ಖಾತೆ ತೆರೆಯುವ ಮುನ್ನವೇ ಔಟ್ ಆಗಿ ಶೂನ್ಯ ಸುತ್ತಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದರು.

ಎರಡನೇ ವಿಕೆಟ್‍ಗೆ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ಅರ್ಧಶತಕದ (71) ಜೊತೆಯಾಟವನ್ನು ಆಡಿದರು. ಇವರಿಬ್ಬರು ಕೆಕೆಆರ್ ಬೌಲರ್‍ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಡಿ ಕಾಕ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. 29 ಎಸೆತಗಳನ್ನು ಎದುರಿಸಿದ ಡಿ ಕಾಕ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.

ಹೂಡಾ ಕೂಡ 41 ರನ್‍ಗಳ (27 ಎಸೆತ, 4 ಬೌಂಡರಿ, 2 ಸಿಕ್ಸರ್) ಮೂಲಕ ಉತ್ತಮವಾದ ಇನ್ನಿಂಗ್ಸ್ ಕಟ್ಟಿದರು. ಇನ್ನಿಂಗ್ಸ್‍ನ ಕೊನೆಯಲ್ಲಿ ಕೃಣಾಲ್ ಪಾಂಡ್ಯ (25) ಹಾಗೂ ಮಾರ್ಕಸ್ ಸ್ಟೋಯಿನಿಸ್ (28 ರನ್, 14 ಎಸೆತ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಅಂತಿಮವಾಗಿ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಹೋಲ್ಡರ್ 13 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ ಎರಡು ಹಾಗೂ ಸುನಿಲ್ ನಾರಾಯಣ್ ಒಂದು ವಿಕೆಟ್ ಕಬಳಿಸಿದರು. ಇದೇ ಮೊದಲ ಬಾರಿ ಆಡುತ್ತಿರುವ ಲಕ್ನೋ, ಇದುವೆರೆಗೆ 11 ಪಂದ್ಯಗಳಲ್ಲಿ ಏಂಟರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಒಟ್ಟು 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

11 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎಂಟು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಈ ಮೂಲಕ ಶ್ರೇಯಸ್ ಪಡೆಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.

ನಂತರದಲ್ಲಿ ಲಕ್ನೋ 176 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡವು ಖಾತೆ ತೆರೆಯುವ ಮುಂಚೆಯೇ ಶೂನ್ಯಕ್ಕೆ ಬಾಬಾ ಇಂದ್ರಜೀತ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ನಂತರದಲ್ಲಿ 25 ರನ್ ಗಳಿಸುವಷ್ಟರಲ್ಲಿಯೇ 3 ವಿಕೆಟ್‍ಗಳನ್ನು ಕಳೆದುಕೊಂಡು ಪೆವಿಲಿಯನ್‍ನತ್ತ ಪರೇಡ್ ನಡೆಸಿದರು. ತಂಡದ ನಾಯಕ ಶ್ರೇಯಸ್ ಆಯ್ಯರ್ ಕೂಡಾ ಹೇಳಿಕೊಳ್ಳುವಷ್ಟೇನು ಬ್ಯಾಟ್ ಬೀಸದೆ 9 ಎಸೆತಗಳಲ್ಲಿ 6 ರನ್ ಗಳಿಸುವಷ್ಟರಲ್ಲಿ ಚಾಮೀರಾಗೆ ವಿಕೆಟ್ ಒಪ್ಪಿಸಿದರು.

6ನೇ ವಿಕೆಟ್‍ಗೆ ಜೊತೆಯಾದ ಜಮೈಕಾದ ದೈತ್ಯ ಆಟಗಾರರಾದ ರಸೆಲ್ 45 ಕೇವಲ (19 ಎಸೆತ, 3 ಬೌಂಡರಿ, 5 ಸಿಕ್ಸರ್) ಹೊಡೆದು ತಂಡದ ಗೆಲುವಿನ ಆಸೆಯನ್ನು ಕೊಂಚ ಚಿಗುರಿಸಿದರು. ನಂತರದಲ್ಲಿ ಆವೇಶ್ ಖಾನ್‍ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಅದೇ ರೀತಿ ಸುನಿಲ್ ನರೈನ್ 22 ರನ್‍ಗಳನ್ನು ಬಾರಿಸಿ 3 ಬೌಂಡರಿ ಒಂದು ಸಿಕ್ಸರ್ ಬಾರಿಸಿ ಜೇಸನ್ ಹೋಲ್ಡರ್ ಅವರ ಬೌಲಿಂಗ್‍ನಲ್ಲಿ ಕೃಣಾಲ್ ಪಾಂಡ್ಯಗೆ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಮುಖ ಮಾಡಿದರು.

 

Share This Article
Leave a Comment

Leave a Reply

Your email address will not be published. Required fields are marked *