ಬೆಂಗಳೂರು: ರಾಜ್ಯದ ಹಲವೆಡೆ ಬೇಸಿಗೆ ಮಳೆ ಅವಾಂತರ ಮುಂದುವರಿದಿವೆ. ಮೊಳಕಾಲ್ಮೂರಿನ ಮೇಗಳಹಟ್ಟಿಯಲ್ಲಿ ಸಿಡಿಲು ಬಡಿದು ಕುರಿ ಮೇಯಿಸಲು ಹೋಗಿದ್ದ ತಾಯಿ-ಮಗ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು, ನಂದಿಗಿರಿಧಾಮದಲ್ಲಿ ಮರಗಳು ಧರೆಗುರುಳಿವೆ.
ನಂದಿಬೆಟ್ಟದ ಪ್ರವೇಶದ್ವಾರದ ಬಳಿ ಇರುವ 2 ಮರಗಳು ನೆಲಕಚ್ಚಿದ್ದು, ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡು ಪ್ರವಾಸಿಗರು ಪರದಾಡಿದ್ರು. ಗುಡಿಬಂಡೆಯಲ್ಲಿ ಮಳೆ ಹೊಡೆತಕ್ಕೆ ವ್ಯಾಪಾರಕ್ಕಿಟ್ಟ ತರಕಾರಿ ಕೊಚ್ಚಿ ಹೋಗಿದೆ. ಕೋಲಾರದ ಕೆಜಿಎಫ್‍ನಲ್ಲಿಯೂ ಆಲಿಕಲ್ಲು ಮಳೆ ಆಗಿದೆ. ಬಂಗಾರಪೇಟೆಯ ಗುಟ್ಟಹಳ್ಳಿಯಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದೆ. ಕೊಯ್ಲಿಗೆ ಬಂದಿದ್ದ ಭತ್ತ ನಾಶವಾಗಿದೆ. ಇದನ್ನೂ ಓದಿ: ನೀವು ಮಮತಾ ಬ್ಯಾನರ್ಜಿ ಏಜೆಂಟ್, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್ ಮುಖಂಡರು, ವಕೀಲರ ಆಕ್ರೋಶ
ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆ ಆಗಿದೆ, ಹಾರಂಗಿ ಡ್ಯಾಂ ಬಳಿ ಆರು ಕೆಜಿ ತೂಕದಷ್ಟು ಭಾರೀ ಗಾತ್ರದ ಆಲಿಕಲ್ಲು ಬಿದ್ದಿವೆ. ಈ ಭಾಗದ ಹಲವು ಮನೆಗಳಿಗೆ ಇದ್ರಿಂದ ಹಾನಿಯುಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯುಂಟಾಗಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತುಮಕೂರಿನ ಚಿಕ್ಕನಾಯನಹಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹಲವು ಮರ, ವಿದ್ಯುತ್ ಕಂಬಗಳು ಉರುಳಿವೆ. ಹಲವು ಮನೆಗಳಿಗೆ ಹಾನಿಯುಂಟಾಗಿದೆ.
ಅತ್ತ ಮೈಸೂರಿನ ಹುಣಸೂರು ತಾಲೂಕಿನ ಸಬ್ಬನಹಳ್ಳಿಯಲ್ಲಿ ಮಳೆ ಹೊಡೆತಕ್ಕೆ ಬಾಳೆ ಬೆಳೆ ನಾಶವಾಗಿದೆ. ಬೆಂಗಳೂರಿನಲ್ಲಿ ಸಂಜೆ ಬಿಟ್ಟುಬಿಡದೇ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ರಾಜ್ಯದಲ್ಲಿ ಇನ್ನೂ 2-3 ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ