ಅಪ್ಪು ನೆನಪಿನಾರ್ಥ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿದ ಮಳಮಾಚನಹಳ್ಳಿ ಗ್ರಾಮಸ್ಥರು

Public TV
2 Min Read

ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನ ಅಗಲಿ ತಿಂಗಳುಗಳೇ ಕಳೆದರೂ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಅವರು ಮಾಡಿದ ಸಮಾಜಮುಖಿ ಸೇವೆಗಳು ಎಂದಿಗೂ ಎಂದೆಂದಿಗೂ ಅಜರಾಮರ. ಅವರ ಬದುಕೇ ಹಲವರಿಗೆ ಸ್ಫೂರ್ತಿ. ಅದೇ ಸ್ಪೂರ್ತಿ ಸದಾಶಯದೊಂದಿಗೆ ಇಲ್ಲೊಂದು ಊರಿನ ಗ್ರಾಮಸ್ಥರು ಸಮಾಜಮುಖಿ ಕಾರ್ಯ ಮಾಡಿ ಅಪ್ಪು ಹೆಸರನ್ನ ಮತ್ತಷ್ಟು ಅಜರಾಮರ ಮಾಡಿಸಿದ್ದಾರೆ.

ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಶಿಥಿಲಾವಸ್ಥೆಗೆ ತಲುಪಿ ಹಾಳಾಗಿದ್ದ ಬಸ್ ತಂಗುದಾಣಕ್ಕೆ ಪುನೀತ್ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹೈಟೆಕ್ ಟಚ್ ನೀಡಿದ್ದಾರೆ. ಹಾಳಾಗಿದ್ದ ಕಟ್ಟಡವನ್ನ ಮರು ನಿರ್ಮಾಣ ನವೀಕರಣ ಮಾಡಿ ಅಚ್ಚುಕಟ್ಟಾಗಿ ಹೊಚ್ಚ ಹೊಸ ತಂಗುದಾಣವಾಗಿ ಮಾಡಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಬಸ್ ತಂಗುದಾಣ ಅಂತ ಹೆಸರಿಟ್ಟು ಕರ್ನಾಟಕದ ಬಾವುಟದ ಬಣ್ಣ ಹಳದಿ ಕೇಸರಿಯಲ್ಲಿ ಬಸ್ ತಂಗುದಾಣ ಕಂಗೊಳಿಸುತ್ತಿದೆ. ಹೊಸ ಬಸ್ ತಂಗುದಾಣಕ್ಕೆ ಹೂವಿನ ಅಲಂಕಾರ ಮಾಡಿ ಪೂಜೆ ಪುನಸ್ಕಾರ ಮಾಡಿ ಲೋಕಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ ನೀವೇಕೆ ಹಿಂದಿಗೆ ಡಬ್ ಮಾಡುತ್ತೀರಿ?- ಕಿಚ್ಚ ಸುದೀಪ್‌ಗೆ ಅಜಯ್ ದೇವಗನ್ ಪ್ರಶ್ನೆ

ಬಣ್ಣಬಣ್ಣಗಳಿಂದ ಕಲರ್‍ಫುಲ್ ಆಗಿ ಕಂಗೊಳಿಸುತ್ತಿರೋ ಬಸ್ ತಂಗುದಾಣದಲ್ಲಿ ರಾಜ್ ಕುಮಾರ್ ಹಾಗೂ ಪುನೀತ್ ರವರ ಭಾವಚಿತ್ರಗಳನ್ನ ಚಿತ್ರಿಸಲಾಗಿದೆ. ಬಸ್ ತಂಗುದಾಣದ ಗೋಡೆಗಳ ಮೇಲೆ ಸಮಾಜಮುಖಿ ಸಂದೇಶ ಸಾರುವ ಬರಹಗಳನ್ನ ಬರೆಯಲಾಗಿದೆ. ಮತ್ತೊಂದೆಡೆ ಸುರಕ್ಷತೆ ಹಿತದೃಷ್ಠಿಯಿಂದ ಸಿಸಿಟಿವಿ ಸಹ ಅಳವಡಿಸಲಾಗಿದೆ. ಹೊಚ್ಚ ಹೊಸ ಬಸ್ ತಂಗುದಾಣ ಎಲ್ಲರ ಮನಸೂರೆಗೊಳ್ಳುವಂತೆ ಅತ್ಯಾಕರ್ಷಕವಾಗಿ ಅಪ್ಪು ನೆನೆಪು ಮೂಡುವಂತಿದೆ.

ಮಳಮಾಚನಹಳ್ಳಿ ಗ್ರಾಮಸ್ಥರ ಮಾದರಿ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ದಾರಿ ಹೋಕರು ತಮ್ಮೂರಲ್ಲಿ ಇದೇ ರೀತಿಯ ಬಸ್ ತಂಗುದಾಣ ನಿರ್ಮಾಣ ಮಾಡಬೇಕು ಅನ್ನೋ ಮಾತುಗಳನ್ನಾಡುತ್ತಿದ್ದಾರೆ. ಒಟ್ಟಿನಲ್ಲಿ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋ ಮಾತಿನಂತೆ ಅಪ್ಪು ನಮ್ಮೆಲ್ಲರ ಮನದಲ್ಲಿ ಸದಾ ಜೀವಂತವೇ ಸರಿ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

Share This Article
Leave a Comment

Leave a Reply

Your email address will not be published. Required fields are marked *