ಕೇರಳ ರಾಜ್ಯದ ಲಾಟರಿ ಮಾರಾಟ – ಬಡವರು, ಕೂಲಿ ಕಾರ್ಮಿಕರೇ ಟಾರ್ಗೆಟ್!

Public TV
2 Min Read

ಚಾಮರಾಜನಗರ: ರಾಜ್ಯದಲ್ಲಿ ಬಡವರ ಬದುಕಿಗೆ ಕೊಳ್ಳಿ ಇಟ್ಟಿದ್ದ ಲಾಟರಿ ನಿಷೇಧಿಸಿ 15 ವರ್ಷಗಳೇ ಕಳೆದಿವೆ. ಆದರೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಹೊರರಾಜ್ಯದ ಲಾಟರಿ ಆಮಿಷಕ್ಕೆ ಬಲಿ ಬೀಳುತ್ತಿರುವ ಬಡವರು, ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗುತ್ತಿದೆ.

ಬಡಬಗ್ಗರು, ಕೂಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಹಣವನ್ನೆಲ್ಲಾ ಲಾಟರಿಗೆ ಸುರಿದು ಜೀವನ ಹಾಳು ಮಾಡಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ 2007ರಲ್ಲಿ ಅಂದಿನ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದಲ್ಲಿ ಲಾಟರಿ ನಿಷೇಧಿಸಿತ್ತು. ರಾಜ್ಯದಲ್ಲಿ ಲಾಟರಿ ನಿಷೇಧವಷ್ಟೇ ಅಲ್ಲ ಹೊರರಾಜ್ಯಗಳ ಮಾರಾಟವನ್ನು ನಿರ್ಬಂಧಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹೊರ ರಾಜ್ಯಗಳ ಲಾಟರಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ 

ಬಸ್‍ಗಳಲ್ಲಿ ಕೇರಳಕ್ಕೆ ಹೋಗುವ ದಂಧೆಕೋರರು ಅಲ್ಲಿನ ಲಾಟರಿಗಳನ್ನು ತಂದು ಕಾಡಂಚಿನ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಲಾಟರಿ ಆಸೆಗೆ ಬಲಿ ಬಿದ್ದು ಬಡಜನರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಅವರು ಈ ಕುರಿತು ಮಾತನಾಡಿದ್ದು, ಸೆನ್ ಹಾಗು ಜಿಲ್ಲೆಯ ವಿವಿಧ ಠಾಣೆಗಳ ಪೆÇಲೀಸರು ಇತ್ತೀಚಿನ ದಿನಗಳಲ್ಲಿ ಹೊರರಾಜ್ಯಗಳ ಲಾಟರಿ ದಂಧೆ ಪತ್ತೆ ಹಚ್ಚಿ 12 ಪ್ರಕರಣ ದಾಖಲಿಸಿಕೊಂಡು ಹಲವರನ್ನು ಬಂಧಿಸಲಾಗಿದೆ. ಇದರ ಜೊತೆಗೆ ಲಕ್ಷಾಂತರ ರೂ. ಮೌಲ್ಯದ ಲಾಟರಿ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ. ಮಲೆಮಹದೇಶ್ವರಬೆಟ್ಟ, ಕೊಳ್ಳೇಗಾಲ ಗುಂಡ್ಲುಪೇಟೆ ಸೇರಿದಂತೆ ಗಡಿಯಂಚಿನ ಗ್ರಾಮಗಳಲ್ಲಿ ಕೇರಳ ರಾಜ್ಯದ ಲಾಟರಿಗಳನ್ನು ಕದ್ದುಮುಚ್ಚಿ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಲಾಟರಿ ದಂಧೆ ವಿರುದ್ಧ ತೀವ್ರ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಾಮಾ ಜ್ಯೂನಿಯರ್ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಬಂದ 4 ಮಕ್ಕಳು 

12 ಪ್ರಕರಣ ದಾಖಲಾಗಿದ್ದರೂ ಕೇರಳ ಲಾಟರಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕೇರಳದಿಂದ ನಿತ್ಯ ಚಾಮರಾಜನಗರ ಜಿಲ್ಲೆಗೆ ಬರುವವರ ಮೇಲೆ ನಿಗಾ ವಹಿಸಬೇಕು. ಲಾಟರಿ ದಂಧೆಯಲ್ಲಿ ತೊಡಗಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಬಂಧಿಸಬೇಕು. ಆ ಮೂಲಕ ಗಡಿಯಂಚಿನ ಜನರ ಬದುಕಿಗೆ ಮಾರಕವಾಗಿರುವ ಹೊರರಾಜ್ಯಗಳ ಲಾಟರಿ ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *