ಪುರದಮ್ಮ ಕಾಯ್ತಿದ್ದಾಳೆ, ಕಾಡಿಗೆ ಬೆಂಕಿ ಹಾಕಿದರೆ ಜೀವನ ಸರ್ವನಾಶ – ಅರಣ್ಯದಲ್ಲಿ ಬ್ಯಾನರ್

Public TV
1 Min Read

ಚಿಕ್ಕಮಗಳೂರು: ಈ ಅರಣ್ಯವನ್ನ ಪುರದಮ್ಮ ಹಾಗೂ ರೇವಣಸಿದ್ದೇಶ್ವರ ದೇವರು ಕಾಯುತ್ತಿದ್ದಾರೆ. ಈ ಅರಣ್ಯಕ್ಕೆ ಯಾರಾದರೂ ಬೆಂಕಿ ಹಾಕಿದರೆ ಅವರ ಜೀವನ ಸರ್ವನಾಶವಾಗಲಿದೆ ಎಂದು ಸ್ಥಳಿಯರೇ ಅರಣ್ಯ ರಕ್ಷಣೆಗೆ ಮುಂದಾಗಿ, ಅರಣ್ಯದಲ್ಲಿ ಬ್ಯಾನರ್ ಹಾಕಿರುವ ಅಪರೂಪದ ಘಟನೆಗೆ ತಾಲೂಕಿನ ಸಿಂದಿಗೆರೆ ಮೀಸಲು ಅರಣ್ಯ ವಿಭಾಗ ಸಾಕ್ಷಿಯಾಗಿದೆ.

ಈಗಾಗಲೇ ಕಾಡನ್ನ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಆದರೂ, ನಾನಾ ರೀತಿಯ ಮೂಢನಂಬಿಕೆಗಳಿಂದ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದಾರೆ. ಹಾಗಾಗಿ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯ ದೇವಗೊಂಡನಹಳ್ಳಿ, ಕರಡಿಗವಿಮಠ, ಸಿಂದಿಗೆರೆ, ಎಸ್.ಬಿದರೆ, ಭೂಚೇನಹಳ್ಳಿ ಕಾವಲ್‍ನ ಹಲವು ಕಡೆಗಳಲ್ಲಿ ಈ ರೀತಿಯ ಬ್ಯಾನರ್ ಹಾಕಿ, ಕಿಡಿಗೇಡಿಗಳಿಗೆ ಭಯ ಹುಟ್ಟಿಸಿದ್ದಾರೆ.

ಅರಣ್ಯ ಅಧಿಕಾರಿಗಳು, ಕೇಸ್‍ಗೆಲ್ಲಾ ಹೆದರದವರು ದೇವರಿಗದರೂ ಹೆದರಿ ಬೆಂಕಿ ಹಾಕುವುದನ್ನ ನಿಲ್ಲಿಸಲಿ ಎಂದು ಈ ರೀತಿಯ ಬ್ಯಾನರ್ ಹಾಕಿದ್ದಾರೆ. ಈಗಾಗಲೇ ಅರಣ್ಯಕ್ಕೆ ಬೆಂಕಿ ಬೀಳುವುದನ್ನ ನಿಯಂತ್ರಿಸಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಇಲಾಖಾ ವ್ಯಾಪ್ತಿಯ ಜೊತೆ ಸಾರ್ವಜನಿಕರಿಗೆ ಜಾಗೃತಿಯನ್ನೂ ಮೂಡಿಸಿದ್ದಾರೆ. ಆದರೂ, ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಡನಂಬಿಕೆಗೆ ಅರಣ್ಯ ಬಲಿಯಾಗುತ್ತಿದೆ. ಹಾಗಾಗಿ, ಸಿಂದಿಗೆರೆ ಗ್ರಾಮದ ಜನ ಅರಣ್ಯ ರಕ್ಷಣೆ ದೇವರ ಮೊರೆ ಹೋಗಿದ್ದಾರೆ.

ಇತ್ತೀಚೆಗೆ ಅರಣ್ಯ ಇಲಾಖೆ ಬೆಂಕಿ ಅವಘಡಗಳನ್ನ ನಿಯಂತ್ರಿಸಲು ಡ್ರೋಣ್ ಮೊರೆ ಹೋಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್ ಹಾರಿಸಿ ಕಾಡಿಗೆ ಬೆಂಕಿ ಹಾಕುವವರ ಮೇಲೆ ನಿಗಾ ವಹಿಸಿತ್ತು. ಆದರೂ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಕಿಡಿಗೇಡಿಗಳ ಕೃತ್ಯಕ್ಕೆ ಕಾಡಿಗೆ ಬೆಂಕಿ ಹಾಕುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಹಾಗಾಗಿ ಸ್ಥಳಿಯರು ಈ ಹೊಸ ದಾರಿಯ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *