ಚಿಕ್ಕಮಗಳೂರು: ಇದು ಆಸ್ಪತ್ರೆ ಇಲ್ಲದ ಊರು, ನಿಧಾನವಾಗಿ ಚಲಿಸಿ ಮುಖ್ಯಮಂತ್ರಿಗಳೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬ್ಯಾನರ್ ಮೂಲಕ ಸ್ವಾಗತ ಕೋರಿರುವ ಪ್ರಸಂಗ ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.
ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೃಂಗೇರಿ ಹಾಗೂ ಹರಿಹರಪುರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಶೃಂಗೇರಿಯ ಮೆಣಸೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಿಂದ ಇಳಿದು ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ʻಇದು ಆಸ್ಪತ್ರೆ ಇಲ್ಲದ ಊರು, ಮುಖ್ಯಮಂತ್ರಿಗಳೇ ನಿಧಾನವಾಗಿ ಚಲಿಸಿʼ ಎಂದು ಬ್ಯಾನರ್ ಕಟ್ಟಿ ಅಣಕಿಸುವ ರೀತಿ ಜನರು ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ: 35 ಲಕ್ಷ ಪಾವತಿ ಮಾಡಿ 5 ಲಕ್ಷ ಸಿಗದೇ ಪೇಚಾಡಿದ – ಆಪ್ತ ಸ್ನೇಹಿತನಿಂದಲೇ ಪಿಎಸ್‌ಐ ಅಕ್ರಮ ಲೀಕ್ ಆಗಿದ್ದು ಹೇಗೆ?
15 ವರ್ಷಗಳಿಂದ ಆಸ್ಪತ್ರೆಗಾಗಿ ಹೋರಾಡುತ್ತಿದ್ದೇವೆ. ಬರೀ ಭರವಸೆ ನೀಡಿದವರೇ ಹೆಚ್ಚು. ಸರ್ಕಾರ ಮಾತು ತಪ್ಪುತ್ತಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ಬಳಿಕ ಶೃಂಗೇರಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಾಗೂ ಇಲಾಖೆಯಿಂದ ಮಂಜೂರಾತಿ ಮಾಡಿಸುವುದು ನಮ್ಮ ಕೆಲಸ. ಜಾಗ ಸಿಕ್ಕ ಕೂಡಲೇ ಕಾಮಗಾರಿಯನ್ನು ಆರಂಭಿಸುತ್ತೇವೆ. ಜಾಗದ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಆದಷ್ಟು ಬೇಗ ಅದಕ್ಕೆ ಜಾಗ ಮಂಜೂರಾತಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಹರಿಪ್ರಿಯಾ ನಟನೆಯ ತಾಯಿ ಕಸ್ತೂರ್ ಗಾಂಧಿ
ಈ ವೇಳೆ ಸ್ಥಳೀಯರು, ಅದಕ್ಕೊಂದು ಸಮಯ ನಿಗದಿಪಡಿಸಿ. ಯಾವಾಗ ಕಾಮಗಾರಿ ಆರಂಭಿಸುತ್ತೀರಿ ಎನ್ನುವುದನ್ನು ತಿಳಿಸಿ ಎಂದು ಒತ್ತಾಯಿಸಿದರು. ಆಗ ಸಿಎಂ ಮಾತನಾಡಿ, ಪ್ರಾಮಿಸ್ ಮಾಡಲು ಆಗಲ್ಲ. ನಾನು ಕೆಲಸ ಮಾಡಿಸುತ್ತೇನೆ. ಮುಖ್ಯಮಂತ್ರಿಯಾಗಿ ಆಶ್ವಾಸನೆ ಕೊಡುತ್ತಿದ್ದೇವೆ. ಸಮಯ ಹೇಳಲು ಆಗುವುದಿಲ್ಲ. ಜಾಗ ಸಿಗುವ ಮುನ್ನವೇ ಅನುದಾನ ಮಂಜೂರು ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಜಾಗ ಸಿಕ್ಕ ನಂತರ ಕೆಲಸ ಮಾಡಿಸುತ್ತೇವೆ ಎಂದು ತಿಳಿಸಿದ್ದಾರೆ.