ಬೆಂಗಳೂರು: ಅಂದು ಕೆ.ಜೆ. ಜಾರ್ಜ್‍ಗೆ ಕಂಟಕವಾಗಿದ್ದ ಸರ್ಕಾರಿ ಬಂಗಲೆ ಇಂದು ಸಚಿವ ಈಶ್ವರಪ್ಪಗೂ ಕಂಟಕ ತಂದುಬಿಡ್ತಾ ಎಂಬ ಪ್ರಶ್ನೆಯೊಂದು ಮೂಡಿದೆ.
ಕುಮಾರ ಕೃಪಾ ನಂಬರ್ 2 ನಿವಾಸ ಸಚಿವರಿಗೆ ಕಂಟಕನಾ ಎಂಬ ಅನುಮಾನ ಎದುರಾಗಿದೆ. ಯಾಕೆಂದರೆ ಅಂದು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದಾಗ ಜಾರ್ಜ್‍ಗೆ ಕುಮಾರಕೃಪಾ 2 ನಿವಾಸ ಕೊಡಲಾಗಿತ್ತು. ಆ ನಿವಾಸದಲ್ಲಿ ಇದ್ದಾಗಲೇ ಜಾರ್ಜ್ ಮೇಲೆ ಗಣಪತಿ ಆತ್ಮಹತ್ಯೆ ಕೇಸ್ ಎದುರಾಗಿತ್ತು.
ಅಲ್ಲದೆ ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ಇದೀಗ ಅದೇ ಕುಮಾರಕೃಪಾ 2 ರಲ್ಲಿ ಈಶ್ವರಪ್ಪ ಇದ್ದಾರೆ. ಈಗ ಈಶ್ವರಪ್ಪ ಮೇಲೆ ಸಂತೋಷ್ ಆತ್ಮಹತ್ಯೆ ಕೇಸ್ ಎದುರಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ
ಇತ್ತ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹೆಸರು ಕೇಳಿಬರುತ್ತಿದ್ದಂತೆಯೇ ರಾಜ್ಯಾದ್ಯಂತ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ ಬಿಜೆಪಿ ಹೈಕಮಾಂಡ್ ಕೂಡ ವರದಿ ಪಡೆದಿದ್ದು, ಈಶ್ವರಪ್ಪ ಅವರು ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟಿದೆ. ಅಂತೆಯೇ ಸದ್ಯ ಈಶ್ವರಪ್ಪ ಅವರು ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳಲಿದ್ದು, ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ.
ಶಿವಾನಂದ ಸರ್ಕಲ್ ಬಳಿಯ ಗಾಂಧಿಭವನದ ರಸ್ತೆಯಲ್ಲಿ ಒಟ್ಟು ಮೂರು ಸರ್ಕಾರಿ ಬಂಗಲೆಗಳು ಇವೆ. ಕುಮಾರಕೃಪಾ 1, 2, 3 ಸರ್ಕಾರಿ ಬಂಗಲೆಗಳು ಇವೆ. ನಂಬರ್ 1ರಲ್ಲಿ ಈಗ ಸಿದ್ದರಾಮಯ್ಯ, ನಂಬರ್ 2ರಲ್ಲಿ ಈಶ್ವರಪ್ಪ, ನಂಬರ್ 3 ರಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಇದ್ದಾರೆ.