ಬೆಳಗಾವಿ: ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ, ಕೊಲೆಯಾಗಿದ್ದು ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತ ಸಂತೋಷ ಪತ್ನಿ ಜಯಶ್ರೀ ಪಾಟೀಲ್ ಕಿಡಿಕಾರಿದರು.
ನಗರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ ಕೊಲೆ. ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು. ಈಶ್ವರಪ್ಪ ಕೇಳಿರುವ ಕಮಿಷನ್ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದರು. 4 ಕೋಟಿ ಕಾಮಗಾರಿ ಮಾಡಿದ್ದೇನೆ. ಈಶ್ವರಪ್ಪ 40% ಕಮಿಷಿನ್ ಕೇಳುತ್ತಿದ್ದಾರೆ. 40% ಕಮಿಷನ್ ಕೊಟ್ಟರೆ ನಾನು ಸಂಪೂರ್ಣ ಹಾಳಾಗುತ್ತೇನೆ ಎನ್ನುತ್ತಿದ್ದರು.
ಮೈಮೇಲೆ ಇದ್ದ ಬಂಗಾರ ಅಡವಿಟ್ಟು 108 ಕಾಮಗಾರಿ ಮಾಡಿಸಿದರು. ಬಿಲ್ ಬಂದ ಮೇಲೆ ಬಂಗಾರ ಆಭರಣಗಳನ್ನು ಬಿಡಿಸಿ ಕೊಡುತ್ತೇನೆ ಅಂತಾ ಹೇಳಿದ್ದರು. ಆತ್ಮಹತ್ಯೆಗೂ ಮುನ್ನ ಸಂಜೆ ಏಳು ಗಂಟೆಗೆ ನನ್ನ ಮತ್ತು ಮಗನ ಜೊತೆಗೆ ಚೆನ್ನಾಗಿಯೇ ಮಾತನಾಡಿದ್ದರು. ನೆಟ್‍ವರ್ಕ್ ಸಿಗುತ್ತಿಲ್ಲ ಬೆಳಗ್ಗೆ ಮಾತನಾಡುತ್ತೇನಿ ಅಂತ ನನ್ನ ಜೊತೆಗೆ ನಗು, ನಗುತ್ತಲೇ ಮಾತನಾಡಿದ್ದರು. ಬೆಳಗ್ಗೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡಲಿಲ್ಲ. ಬೇರೆಯವರ ಮೂಲಕ ವಿಷಯ ಗೊತ್ತಾಯಿತು ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲು
ಸಾಲಸೋಲ ಮಾಡಿ ಸ್ವ ಗ್ರಾಮದಲ್ಲಿ ಕನಸಿನ ಮನೆಯನ್ನು ಕಟ್ಟಿಸಿದ್ದರು. ಅದು ಅವರ ಕನಸಿನ ಮನೆ ಆಗಿತ್ತು. ಅದಕ್ಕೆ ಕನಸ್ಸು ಅಂತಾನೇ ಹೆಸರು ಇಟ್ಟಿದ್ದರು. ಕಾಮಗಾರಿ ಬಿಲ್ ಬರುತ್ತದೆ. ಮನೆ ಗೃಹಪ್ರವೇಶ ಮಾಡೋಣ ಎಂದು ಹೇಳುತ್ತಿದ್ದರು. ಆದರೀಗ ಎಲ್ಲವನ್ನು ಬಿಟ್ಟು ಹೋಗಿದ್ದಾರೆ. ನನ್ನ, ನನ್ನ ಮಗನನ್ನು ಅನಾಥರಾಗಿ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಸಚಿವ ಈಶ್ವರಪ್ಪಗೆ ಶಿಕ್ಷೆ ಆಗಲೇಬೇಕು ಎಂದು ದುಃಖ ತೋಡಿಕೊಂಡರು.
ಇದೇ ವೇಳೆ ಮಾತಾನಾಡಿದ ಮೃತ ಸಂತೋಷ ತಾಯಿ, ನನ್ನ ಮಗ ಬೇಕು, ನನ್ನ ಮಗನನ್ನು ತಂದು ಕೊಡಿ ಅಂತ ಕಣ್ಣೀರು ಹಾಕಿದರು. ನನ್ನನ್ನು ಮಮ್ಮಿ ಮಮ್ಮಿ ಎಂದು ಕರೆಯುವ ಮಗ ವಾಪಸ್ ಬರುತ್ತಾನಾ? ಬಿಲ್ ಆಗುತ್ತಿಲ್ಲ ಅಮ್ಮ, ಬಿಲ್ ಮಾಡಿಸಿಕೊಂಡು ಬರುತ್ತೇನೆ ಅಂತ ಹೇಳಿದ್ದನು. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿ ಅಲ್ಲ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು