ಬೆಂಗಳೂರಿನಲ್ಲಿ ಮೊದಲ ಬಾರಿಗೆ ಶ್ರೀರಾಮ ರಥಯಾತ್ರೆ

Public TV
1 Min Read

ಬೆಂಗಳೂರು: ಶ್ರೀರಾಮನವಮಿ ಪ್ರಯುಕ್ತ ಪದ್ಮನಾಭನಗರದಲ್ಲಿ ಅದ್ಧೂರಿ ಶ್ರೀರಾಮ ರಥಯಾತ್ರೆ ನಡೀತು. ಸಾವಿರಾರು ರಾಮನ ಭಕ್ತರು ರಥಯಾತ್ರೆಯಲ್ಲಿ ಭಾಗವಹಿಸಿದ್ದರು. ಎಲ್ಲೆಲ್ಲೂ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು.

ಪದ್ಮನಾಭನಗರ ಶಾಸಕ ಹಾಗೂ ಕಂದಾಯ ಸಚಿವ ಆರ್‌.ಅಶೋಕ್ ನೇತೃತ್ವದಲ್ಲಿ ಅದ್ಧೂರಿ ರಥಯಾತ್ರೆ ಜರುಗಿತು. ಪದ್ಮನಾಭನಗರದಿಂದ ಸುಮಾರು 6 ಕಿಲೋಮೀಟರ್ ನಡೆದ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಶ್ರೀರಾಮನ ಕೃಪೆಗೆ ಪಾತ್ರರಾದರು. ಕನಕಪೀಠದ ಈಶ್ವರಾನಂದಪುರಿ ಶ್ರೀಗಳು ಹಾಗೂ ಮಾದರ ಚೆನ್ನಯ್ಯ ಶ್ರೀಗಳು ರಥಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ ಸರ್ಕಾರ

ಹೂಗಳಿಂದ ಅಲಂಕಾರವಾದ ಭವ್ಯವಾದ ರಥಯಾತ್ರೆಯಲ್ಲಿ ಶ್ರೀರಾಮನು ಕಂಗೊಳಿಸುತ್ತಿದ್ದನು. ಪದ್ಮನಾಭನಗರದಿಂದ ಪ್ರಾರಂಭ ಆದ ರಥಯಾತ್ರೆ, ಕರೀಸಂದ್ರ ವಾರ್ಡ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ತ್ಯಾಗರಾಜನಗರ, ಉಮಾ ಮಹೇಶ್ವರಿ ದೇವಾಲಯ, ಕೆ.ಆರ್. ರೋಡ್, ವ್ಯಾಪ್ತಿಯಲ್ಲಿ ರಥಯಾತ್ರೆ ನಡೀತು. ಅಂತಿಮವಾಗಿ ಅಶೋಕ್ ಕಚೇರಿ ಬಳಿ ರಥಯಾತ್ರೆ ಮುಕ್ತಾಯ ಆಯಿತು. ಇದನ್ನೂ ಓದಿ: ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿದವರು, ತಲೆ ಹೊಡೆದಾಗ ಏಕೆ ತೋರಲಿಲ್ಲ: ಸಿ.ಟಿ.ರವಿ ಪ್ರಶ್ನೆ

ರಥಯಾತ್ರೆ ಪ್ರಾರಂಭ ಆಗುತ್ತಿದ್ದಂತೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು, ಸಾವಿರಾರು ಭಕ್ತರು ಕೇಸರಿ ಶಾಲು, ಕೇಸರಿ ಪೇಟ ಧರಿಸಿ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ಎಲ್ಲೆಲ್ಲೂ ಭಗವತ್ ಧ್ವಜ, ರಾಮನ ಧ್ವಜ ರಾರಾಜಿಸಿದವು. ಕರಡಿ ಕುಣಿತ, ಕಂಸಾಳೆ ಪದ ಸೇರಿದಂತೆ ಜನಪದ ಕಲಾ ತಂಡಗಳು ರಥಯಾತ್ರೆಗೆ ಮತ್ತಷ್ಟು ಮೆರುಗು ತಂದವು. ಪಾದಯಾತ್ರೆಯಲ್ಲಿ ಅಶೋಕ್, ಸಂಸದ ತೇಜಸ್ವಿ ಸೂರ್ಯ ನೃತ್ಯ ಮಾಡಿ ರಥಯಾತ್ರೆಯನ್ನು ಸಂಭ್ರಮಿಸಿದರು.

ರಥಯಾತ್ರೆಯಲ್ಲಿ ಮಾತನಾಡಿದ ಅಶೋಕ್, ಕರ್ನಾಟಕ ರಾಮ ರಾಜ್ಯ ಆಗಬೇಕು. ವಿಜೃಂಭಣೆಯಿಂದ ರಥಯಾತ್ರೆ ಆಗಿದೆ. ಮುಂದಿನ ವರ್ಷದಲ್ಲಿ ಬೆಂಗಳೂರಿನ 27 ಕ್ಷೇತ್ರ ಹಾಗೂ ಇಡೀ ರಾಜ್ಯದಲ್ಲಿ ರಾಮ ರಥಯಾತ್ರೆ ಮಾಡ್ತೀವಿ. ಗಲ್ಲಿ ಗಲ್ಲಿಗಳಲ್ಲಿ ರಾಮನನ್ನು ಪ್ರತಿಷ್ಠಾಪನೆ ಮಾಡ್ತೀವಿ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *