ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ

Public TV
1 Min Read

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತರಾದ ಬಿಜೆಪಿ ಮಾಜಿ ಸಚಿವ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಮಠಧೀಶರಾಗುತ್ತಿದ್ದಾರೆ.

ಹೌದು. ಪುಟ್ಟಸ್ವಾಮಿ ಅವರು ಖಾದಿ ತೊರೆದು ಕಾವಿ ತೊಡಲಿದ್ದು, ಇನ್ನು ಮುಂದೆ ಪೂರ್ಣಾನಂದ ಪುರಿ ಸ್ವಾಮೀಜಿಯಾಗಲಿದ್ದಾರೆ. ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿಯ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಗಳಾಗಲಿದ್ದಾರೆ. ಮೇ 6 ರಂದು ಸನ್ಯಾಸತ್ವದ ದೀಕ್ಷೆ ಪಡೆಯಲಿದ್ದು, ಮೇ 15 ರಂದು ಪೀಠಾಧಿಪತಿಯ ಪಟ್ಟಾಭಿಷೇಕ ನೆರವೇರಲಿದೆ.

ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಿದ್ದಾರೆ. ಇವರನ್ನು ಪುಟ್ಟಸ್ವಾಮಿ ಅವರೇ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲೆ ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದು, 82 ವರ್ಷ ವಯಸ್ಸಿನಲ್ಲಿ ಸ್ವಾಮೀಜಿಯಾಗುತ್ತಿದ್ದಾರೆ. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

ದಿಢೀರ್ ತೀರ್ಮಾನವಲ್ಲ:
ಮಂಗಳವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಪುಟ್ಟಸ್ವಾಮಿ ಅವರು, ಇದು ಧೀಡಿರ್ ಎಂದು ಕೈಗೊಂಡ ತೀರ್ಮಾನವಲ್ಲ. ಜೀವಮಾನದಲ್ಲಿ ಜ್ಞಾನ ಬಂದ ಮೇಲೆ ಗಾಣಿಗ ಸಮಾಜಕ್ಕೆ ಏನಾದರೂ ಮಾಡಬೇಕು ಮತ್ತು ಶಾಶ್ವತವಾದ ಸಂಸ್ಥೆಯೊಂದನ್ನು ಕಟ್ಟಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. 1972ರಲ್ಲಿ ಗಾಣಿಗ ಸಮುದಾಯದ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘ ಸ್ಥಾಪಿಸಿ ಅಧ್ಯಕ್ಷನಾಗಿದ್ದೆ ಎಂದು ಹೇಳಿದರು.

ಎಲ್ಲರಲ್ಲಿಯೂ ಸಾಮರಸ್ಯ ಮೂಡಿಸಿದ್ದೆ. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ರಾಜಕೀಯ ಕಾರ್ಯದರ್ಶಿಯಾಗಿದ್ದ ವೇಳೆ ಅವರ ಬಳಿ ಆದಾಯ ಬರುವಂತಹದ್ದು ಏನನ್ನೂ ಪಡೆದಿಲ್ಲ. ಯಾವುದಕ್ಕೂ ಆಸೆ ಪಟ್ಟಿಲ್ಲ. ಜನಾಂಗಕ್ಕೆ ಸಂಸ್ಥೆಯೊಂದನ್ನು ಕಟ್ಟಲು ಜಮೀನು ನೀಡುವಂತೆ ಕೇಳಿದ್ದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *