ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

Public TV
2 Min Read

ತುಮಕೂರು: ಕಾಯಕಯೋಗಿ, ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಲಿಂಗೈಕ್ಯರಾಗಿ ಮೂರು ವರ್ಷ ಕಳೆದಿವೆ. ಶ್ರೀಗಳ 115ನೇ ಜನ್ಮ ದಿನೋತ್ಸವಕ್ಕೆ ಸಿದ್ದಗಂಗಾ ಮಠದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ.

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯರಾದಾಗ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಯಾವೊಬ್ಬ ರಾಷ್ಟ್ರೀಯ ನಾಯಕರೂ ಶ್ರೀಗಳ ಅಂತಿಮ ದರ್ಶನ ಪಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯಾಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಯಾರೂ ಇತ್ತ ಸುಳಿದಿರಲಿಲ್ಲ. ಕಾಂಗ್ರೆಸ್‍ನ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೂ ಅಂದು ಮಠದ ಕಡೆ ತಲೆ ಹಾಕದವರು ಇಂದು ಪೈಪೋಟಿಗೆ ಬಿದ್ದು ತುಮಕೂರಿನ ಪ್ರವಾಸಕ್ಕೆ ಇಂಟ್ರೆಸ್ಟ್ ತೋರಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜಯಂತ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀಗಳ 115ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರಿಸುಮಾರು 2-3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ವೇದಿಕೆಗೆ ‘ನಡೆದಾಡುವ ಬಸವ ಭಾರತ’ ಅಂತ ಹೆಸರಿಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಸುತ್ತೂರು ಶ್ರೀಗಳು, ಸಿಎಂ ಬೊಮ್ಮಾಯಿ ಸೇರಿ ಹಲವರು ಭಾಗಿ ಆಗಲಿದ್ದಾರೆ. ಈ ನಡುವೆ ಇಂದೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4ಕ್ಕೆ ಬರಲಿರುವ ರಾಹುಲ್ ಗಾಂಧಿ ಗದ್ದುಗೆ ದರ್ಶನ ಬಳಿಕ ಸಿದ್ದಲಿಂಗಸ್ವಾಮಿಜಿಗಳ ಆಶೀರ್ವಾದ ಪಡೆಯಲಿದ್ದಾರೆ.

ಕಾರ್ಯಕ್ರಮದಲ್ಲಿ 100 ಜನ ಗಾಯಕರು, 150 ಮಂದಿ ಕಲಾವಿದರು ಸೇರಲಿದ್ದಾರೆ. ಮಠದ ಆವರಣದಲ್ಲಿ ಬ್ಯಾನರ್, ಕಟೌಟ್‍ಗಳು ರಾರಾಜಿಸುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಗಣಕ್ಕಾಗಿಯೇ ಬಗೆ ಬಗೆಯ ಖಾದ್ಯಗಳು ತಯಾರಾಗ್ತಿದೆ. ಸುಮಾರು 200 ಕ್ವಿಂಟಾಲ್ ಸಿಹಿ ಬೂಂದಿ, 20 ಕ್ವಿಂಟಾಲ್ ಖಾರಾ ಬೂಂದಿ ರೆಡಿಯಾಗ್ತಿದೆ. ಕಳೆದ ಮೂರು ದಿನಗಳಿಂದ 28 ಅಡುಗೆ ಭಟ್ಟರು ಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಉಚಿತ ಎಲ್‍ಪಿಜಿ ಸಿಲಿಂಡರ್ ನೀಡಲು ಹಣ ಮಂಜೂರು: ಪ್ರಮೋದ್ ಸಾವಂತ್

ಒಟ್ಟಿನಲ್ಲಿ ಶ್ರೀಗಳ ಜನ್ಮದಿನೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯದ ಪ್ರಬಲ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜಿದ್ದಿಗೆ ಬಿದ್ದಿವೆ. ಆದರೆ ಅದಕ್ಕಾಗಿ ಶ್ರೀಗಳ ಜನ್ಮದಿನವನ್ನು ನೆಪಮಾಡಿಕೊಂಡಿದ್ದಂತು ಸತ್ಯ.

Share This Article
Leave a Comment

Leave a Reply

Your email address will not be published. Required fields are marked *