‘ದಸರಾ’ ಟೈಟಲ್ ವಿವಾದ: ತೆಲುಗು ಚಿತ್ರದ ವಿರುದ್ಧ ಚಲನಚಿತ್ರ ಮಂಡಳಿ ಮೆಟ್ಟಿಲೇರಿದ ಶರ್ಮಿಳಾ ಮಾಂಡ್ರೆ

Public TV
2 Min Read

ಚಂದನವನದ ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಪ್ರೊಡಕ್ಷನ್ ಹೌಸ್‍ನಲ್ಲಿ ನಿರ್ಮಾಣ ಮಾಡುತ್ತಿರುವ ‘ದಸರಾ’ ಸಿನಿಮಾ ಟೈಟಲ್‍ನನ್ನು ತೆಲುಗು ಸಿನಿಮಾ ಸಹ ಇಟ್ಟುಕೊಂಡಿದೆ. ಇದರಿಂದ ನಮ್ಮ ಸಿನಿಮಾಗೆ ತೊಂದರೆಯಾಗುವುದೆಂದು ಬೇಸರಗೊಂಡ ಚಿತ್ರತಂಡ ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.

‘ದಸರಾ’ ಸಿನಿಮಾ ಮುಖ್ಯಪಾತ್ರದಲ್ಲಿ ಸತೀಶ್ ನೀನಾಸಂ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಪ್ರಸ್ತುತ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನೆಡೆಯುತ್ತಿದೆ. ಈ ವೇಳೆ ತೆಲುಗು ಸಿನಿಮಾ ‘ದಸರ’ ಹೆಸರಿನಲ್ಲಿ ಕಳೆದ ವಾರವಷ್ಟೆ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿತ್ತು. ತನ್ನ ಮೊದಲ ನಿರ್ಮಾಣದಲ್ಲಿ ಈ ರೀತಿ ಆಗುತ್ತಿರುವುದಕ್ಕೆ ಶರ್ಮಿಳಾ ಬೇಸರಗೊಂಡಿದ್ದು, ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

ಈ ಮನವಿ ಪತ್ರದಲ್ಲಿ ಶರ್ಮಿಳಾ, ನಾನು ನನ್ನ ನಿರ್ಮಾಣದ ಮೊದಲ ಸಿನಿಮಾ ‘ದಸರ’ ಟೈಟಲ್ 2020 ರ ಸೆಪ್ಟೆಂಬರ್ ತಿಂಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇದೆ. ಈಗ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ನಡುವೆ ಸುಧಾಕರ್ ಚೆರುಕುರಿ ಎಸ್‍ಎಲ್‍ವಿ ಬ್ಯಾನರ್ ಅಡಿಯಲ್ಲಿ ‘ದಸರ’ ಹೆಸರಿನ ಸಿನಿಮಾದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಮ್ಮ ಸಿನಿಮಾದ ಹೆಸರನ್ನು ನಾವು ಈಗಾಗಲೇ ಬಹಿರಂಗಗೊಳಿಸಿದ್ದೇವೆ. ಅದೇ ಹೆಸರಿನಿಂದ ಸಿನಿಮಾದ ಪ್ರಚಾರ ಸಹ ಮಾಡಿದ್ದೇವೆ. ಈಗ ಅದೇ ಹೆಸರಿನಲ್ಲಿ ತೆಲುಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನಮ್ಮ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ. ನಮ್ಮ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೂ ಹೊಡೆತ ಬೀಳುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

ತೆಲುಗಿನ ನಿರ್ಮಾಪಕರು ತಮ್ಮ ಸಿನಿಮಾದ ಹೆಸರನ್ನು ಕನಿಷ್ಟ ಪಕ್ಷ ಕನ್ನಡ ಡಬ್ಬಿಂಗ್ ವರ್ಷನ್‍ನಲ್ಲಿಯಾದರೂ ಬದಲಾಯಿಸುವಂತೆ ಸೂಚಿಸಿ ಎಂದು ಕೇಳಿಕೊಂಡಿದ್ದಾರೆ.

ತೆಲುಗಿನ ‘ದಸರಾ’ ಸಿನಿಮಾದಲ್ಲಿ ನಟ ನಾನಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಹಳ್ಳಿ ಹೈದನ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *