ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ

Public TV
2 Min Read

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷದಲ್ಲಿ ಮಾರ್ಚ್ 1ರಂದು ಮೃತಪಟ್ಟ ಹಾವೇರಿ ಜಿಲ್ಲೆಯ ಚಳ್ಳಗೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಎಮಿರೆಟ್ಸ್ ವಿಮಾನದ ಮೂಲಕ ಕೆಐಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದೆ.

ನವೀನ್ ಮೃತದೇಹ ತೆಗೆದುಕೊಂಡು ಹೋಗಲು 22 ಮಂದಿ ನವೀನ್ ಕುಟುಂಬ ಸದಸ್ಯರು ಹಾಗೂ ಗ್ರಾಮದ ಮುಖಂಡರು ಆಗಮಿಸಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನವೀನ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ – ಮೂವರು ಆರೋಪಿಗಳ ಬಂಧನ

ಬೆಂಗಳೂರಿನಿಂದ ಆಂಬುಲೆನ್ಸ್ ಮೂಲಕ ಹೊರಟಿರುವ ನವೀನ್ ಮೃತದೇಹ ಬೆಳಗ್ಗೆ 9 ಗಂಟೆ ಸುಮಾರಿಗೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಕ್ಕೆ ತಲುಪಲಿದೆ. ನವೀನ್ ಪಾರ್ಥಿವ ಶರೀರ ಆಗಮಿಸಿದ ಬಳಿಕ ಮೊದಲು ಕುಟುಂಬಸ್ಥರು ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಂತರ ನಿವಾಸದ ಮುಂದೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದಾರೆ. ಎರಡ್ಮೂರು ಗಂಟೆಗಳ ನಂತರ ಗ್ರಾಮದಲ್ಲಿ ನವೀನ್ ಪಾರ್ಥೀವ ಶರೀರವನ್ನು ಮೆರವಣಿಗೆ ನಡೆಸಲಾಗುತ್ತದೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನವೀನ್ ತಂದೆ, ನವೀನ್ ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕು ಅಂದುಕೊಂಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ ಅದಕ್ಕಾಗಿ ಅವನ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಆತನ ಕೊನೆಯ ಆಸೆ ಈಡೇರಿಸುತ್ತೇವೆ. ಈಗಾಗಲೇ ಮಾತು ಕತೆಯಾಗಿ ದಾವಣಗೆರೆಯಿಂದ ವೈದ್ಯರ ತಂಡ ಬರುತ್ತದೆ. ಅಲ್ಲಿಯವರೆಗೆ ವೀರಶೈವ ಸಂಪ್ರದಾಯದಂತೆ ನಮ್ಮ ಮನೆಯ ಗುರುಗಳ ನೇತೃತ್ವದಲ್ಲಿ ಕೊನೆಯ ಪೂಜೆ ನಡೆಯುತ್ತದೆ. ನಮ್ಮ ಮಗನ ಮೃತದೇಹದ ತರಲು ಸಹಾಯ ಮಾಡಿದ ಪ್ರಧಾನಿ ಮೋದಿ ಮತ್ತು ನಮ್ಮ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ: ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

ಮತ್ತೊಂದೆಡೆ ನವೀನ್ ತಾಯಿ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇವತ್ತು ಮಗ ಮನೆಗೆ ಬರುತ್ತಿದ್ದಾನೆ. ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ. ಮಗನ ಆಸೆಯಂತೆ ಡಾಕ್ಟರ್ ಓದಿಸಿದ್ದೇವು. ಆದರೆ ಮಗ ಬಹಳ ಪ್ರತಿಭಾವಂತ ಆಗಿದ್ದ. ಜಮೀನಿನಲ್ಲಿ ಕೆಲಸ ಸಹ ಮಾಡುತ್ತಿದ್ದ. ನಾನು ನವೀನ್ ದೇವಸ್ಥಾನಕ್ಕೆ ಹೋದಾಗ ಬಡವರಿಗೆ ಭಿಕ್ಷೆ ಹಾಕುತ್ತಿದ್ದ. ಡಾಕ್ಟರ್ ಆಗಿ ಬಡವರ ಸೇವೆ ಮಾಡುವ ಆಸೆ ಹೊಂದಿದ್ದ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದೇಹದಾನ ಮಾಡಿದ್ದಾನೆ ಎಂದು ಮಗನನ್ನು ನೆನೆಯುತ್ತಾ ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *