ಕೊಡಗಿನಲ್ಲೇ ಬರಿದಾಗುತ್ತಿದೆ ಕಾವೇರಿ ನೀರು – ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ

Public TV
2 Min Read

ಮಡಿಕೇರಿ: ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಉಂಟುಮಾಡುತ್ತಿದ್ದ ಜೀವನದಿ ಕಾವೇರಿಯಲ್ಲಿ ಇದೀಗ ಮಾರ್ಚ್ ಆರಂಭದಲ್ಲೇ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿರುವುದು ಕಂಡುಬಂದಿದೆ. ಇದೇ ರೀತಿ ಮುಂದುವರಿದಲ್ಲಿ ಒಂದು ವಾರದ ಅವಧಿಯಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಸ್ಥಳೀಯರಲ್ಲಿ ಅತಂಕ ಮನೆ ಮಾಡಿದೆ.

ಕೊಡಗಿನಲ್ಲಿ ಹುಟ್ಟಿ ನಾಡಿನ ಉದ್ದಗಲಕ್ಕೂ ಜೀವನದಿಯಾಗಿ ಹರಿದು ರೈತರಿಗೆ ವರದಾನವಾಗಿರುವ ಕಾವೇರಿಯ ಒಡಲು ಇದೀಗ ಕೊಡಗಿನಲ್ಲೇ ಬರಿದಾಗುತ್ತಿದೆ. ವರ್ಷದ 4 ತಿಂಗಳು ತುಂಬಿ ಹರಿಯುವ ಕಾವೇರಿಯಲ್ಲಿ ಇದೀಗ ನೀರಿನ ಹರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ಸಾಲಿನಲ್ಲಿ ನಿರಂತರವಾಗಿ ಮಳೆ ಸುರಿದರೂ ಕಾವೇರಿ ನದಿ ಜಲಮೂಲಗಳು ಅಲ್ಲಲ್ಲಿ ಬತ್ತಿಹೋಗಿರುವ ದೃಶ್ಯ ಗೋಚರಿಸುತ್ತಿದೆ. ಇದನ್ನೂ ಓದಿ: ಬಾಂಗ್ಲಾ ಹಿಂದೂಗಳ ವಲಸೆ ಬಗ್ಗೆ ಸಿನಿಮಾ ಯಾಕಾಗಿಲ್ಲ: ಕಾಶ್ಮೀರ್‌ ಫೈಲ್ಸ್‌ಗೆ ಲೇಖಕಿ ತಸ್ಲೀಮಾ ನಸ್ರಿನ್ ಪ್ರತಿಕ್ರಿಯೆ

ಕಳೆದ ಕೆಲವು ದಿನಗಳಿಂದ ಮೂಲ ಕಾವೇರಿಯಿಂದ ಕುಶಾಲನಗರ ವರೆಗಿನ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಶ್ಯವಿರುವ ನೀರಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಮೋಟಾರ್ ಪಂಪುಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ಸಾವಿರಾರು ಹೆಚ್‌ಪಿ ಸಾಮರ್ಥ್ಯದ ಮೋಟಾರ್‌ಗಳು ನದಿಯಿಂದ ನೀರನ್ನು ಹಾಯಿಸುತ್ತಿದ್ದು, ಇದರಿಂದ ನದಿಯಲ್ಲಿ ನೀರಿನ ಹರಿವು ಅಲ್ಲಲ್ಲಿ ಸ್ಥಗಿತಗೊಂಡಿದೆ. ನದಿ ತಟದಲ್ಲಿರುವ ಕೃಷಿಕರು ವಾಣಿಜ್ಯ ಬೆಳೆಗಳಿಗೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ನೀರು ಪಂಪ್ ಮಾಡುತ್ತಿದ್ದು, ಇದರಿಂದ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಪಟ್ಟಣಕ್ಕೆ ದಿನನಿತ್ಯ 35 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಜಲಮಂಡಳಿ ಮೂಲಕ ಕೇವಲ 28 ಲಕ್ಷ ಲೀಟರ್ ನೀರನ್ನು ಒದಗಿಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನಿಗೆ ದಿನನಿತ್ಯ 135 ಲೀಟರ್ ನೀರು ಅವಶ್ಯಕತೆಯಿದ್ದು, ಇದನ್ನು ಪೂರೈಸಲು ಪ್ರಸಕ್ತ ಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

ಪಟ್ಟಣ ಪಂಚಾಯಿತಿಯಿಂದ ನೀರು ಸರಬರಾಜು ಮಾಡುತ್ತಿರುವ ಸಂದರ್ಭದಲ್ಲಿ ನೀರು ಪೋಲಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿವಳಿಕೆ ನೀಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರವಾಹ ಬಂದು ಭೂಕುಸಿತವಾದ ಪರಿಣಾಮ ಸಾಕಷ್ಟು ಹೂಳು ಕಾವೇರಿ ನದಿಯ ಒಡಲು ಸೇರುವುದರಿಂದ ನೀರಿನ ಶೇಖರಣೆ ಸಾಕಷ್ಟು ಕುಂಠಿತವಾಗಿದೆ ಎನ್ನುವುದು ಈ ಭಾಗದ ಜನರ ಅಭಿಪ್ರಾಯ.

ಒಟ್ಟಿನಲ್ಲಿ ಕಾವೇರಿ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದೇ ರೀತಿಯಲ್ಲಿ ನೀರಿನ ಹರಿವು ಅಲ್ಲಲ್ಲಿ ಸ್ಥಗಿತಗೊಂಡರೆ ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳು ಸೇರಿದಂತೆ ಕುಶಾಲನಗರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿಯೂ ನೀರಿನ ಕೊರತೆ ಉಂಟಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ಗ್ರಾಮಸ್ಥರ ಅತಂಕಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *