ಹಿಜಬ್ ತೀರ್ಪು: ಮಂಗಳವಾರ ಉಡುಪಿ, ಶಿವಮೊಗ್ಗ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Public TV
1 Min Read

ಉಡುಪಿ/ಶಿವಮೊಗ್ಗ: ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಿ ಎಂದು ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ.

ಹೈಕೋರ್ಟ್‍ನಲ್ಲಿ ಹಿಜಬ್ ತೀರ್ಪು ವಿಚಾರ ನಾಳೆ ಬಹಿರಂಗವಾಗಲಿದೆ. ಈ ಹಿನ್ನೆಲೆ ಶಾಲೆ-ಕಾಲೇಜುಗಳಲ್ಲಿ ಗಲಾಟೆಯಾಗುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಇಂದು ಸಂಜೆ ಈ ಆದೇಶವನ್ನು ಹೊರಡಿಸಿದ್ದಾರೆ. ಇದನ್ನೂ ಓದಿ: ನಾಳೆ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

ಶಿವಮೊಗ್ಗದಲ್ಲಿಯೂ ಹಿಜಬ್ ಭಾರೀ ಸದ್ದು ಮಾಡಿರುವ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಈ ಅವಧಿಯಲ್ಲಿ ಸಮವಸ್ತ್ರ ವಿವಾದ ವಿಚಾರವಾಗಿ ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕೋರ್ಟ್ ತೀರ್ಪಿನ ವಿಚಾರವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಅಥವಾ ಪ್ರತಿಭಟನೆಯನ್ನು ನಡೆಸುವಂತಿಲ್ಲ. ಶಾಲಾ ಕಾಲೇಜು ಆವರಣದ 200 ಮೀಟರ್ ವ್ಯಾಪ್ತಿಯಲ್ಲಿ ಶಾಲಾ ಕಾಲೇಜು ಸಿಬ್ಬಂದಿ, ಆಯಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: RSS ಪಥಸಂಚಲನ – ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಹೂಹಾರ ಹಾಕಿ ಸ್ವಾಗತ

ಹೈಕೋರ್ಟ್ ನೀಡುವ ತೀರ್ಪಿಗೆ ಜನರು ಬದ್ಧರಾಗಿದ್ದು, ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಯಾವುದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *