ಅಯ್ಯರ್, ಜಡೇಜಾ ಜರ್ಬದಸ್ತ್ ಆಟ – ಭಾರತಕ್ಕೆ ಒಲಿದ ಹ್ಯಾಟ್ರಿಕ್‌ ಟಿ20 ಸರಣಿ

By
2 Min Read

ಧರ್ಮಶಾಲಾ: ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾರ ಬಿರುಸಿನ ಬ್ಯಾಟಿಂಗ್‍ಗೆ ಬೆಚ್ಚಿಬಿದ್ದ ಶ್ರೀಲಂಕಾ ಸೋಲೊಪ್ಪಿಕೊಂಡಿದೆ. ಲಂಕಾ ವಿರುದ್ಧ 7  ವಿಕೆಟ್‌ಗಳಿಂದ ಗೆದ್ದ ಭಾರತ 2-0 ಅಂತರದಿಂದ ಸರಣಿ ಕೈವಶ ಪಡಿಸಿಕೊಂಡಿದೆ.

ಗೆಲ್ಲಲು 184 ರನ್‍ಗಳ ಗುರಿ ಪಡೆದ ಟೀಂ ಇಂಡಿಯಾ 17.1 ಓವರ್‌ಗಳಲ್ಲಿ ಇನ್ನೂ 17 ಎಸೆತ ಬಾಕಿ ಇರುವಂತೆ 186 ರನ್ ಸಿಡಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವಿನ ನಗೆ ಬೀರಿತು. ಈ ಮೊದಲು ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಗೆದ್ದಿತ್ತು. ಇದೀಗ ಶ್ರೀಲಂಕಾ ವಿರುದ್ಧ ಸರಣಿ ಜಯದೊಂದಿಗೆ ಹ್ಯಾಟ್ರಿಕ್‌ ಸರಣಿ ಗೆದ್ದಂತಾಗಿದೆ. ಇದನ್ನೂ ಓದಿ: ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕಿಲ್ಲ ಪ್ರೇಕ್ಷಕರಿಗೆ ಎಂಟ್ರಿ

ಭಾರತದ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 1 ರನ್ ಮತ್ತು ಇಶನ್ ಕಿಶನ್ 16 ರನ್ (15 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಆಸರೆಯಾದ ಸಂಜು ಸ್ಯಾಮ್ಸನ್ 39 ರನ್ (25 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ನೆರವಾದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಆರ್ಭಟಿಸಿದರು. ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಯ್ಯರ್ ಅಜೇಯ 74 ರನ್ (44 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ 45 ರನ್ (18 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಇನ್ನೂ 17 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ನಿಸ್ಸಾಂಕ, ದಾಸುನ್ ಶನಕ ಹೋರಾಟ ವ್ಯರ್ಥ:
ಈ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಪಾತುಂ ನಿಸ್ಸಾಂಕ ಮತ್ತು ದನುಷ್ಕ ಗುಣತಿಲಕ ಜೋಡಿ ಮೊದಲ ವಿಕೆಟ್‍ಗೆ 67 ರನ್ (52 ಎಸೆತ) ಜೊತೆಯಾಟವಾಡಿ ಗಮನ ಸೆಳೆಯಿತು. ದನುಷ್ಕ ಗುಣತಿಲಕ 38 ರನ್ (29 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು ನಂತರ ಶ್ರೀಲಂಕಾ ವಿಕೆಟ್ ಕಳೆದುಕೊಂಡು ಸಾಗಿತು. ಇದನ್ನೂ ಓದಿ: ಟಿ20 ಸರಣಿಯಿಂದ ಗಾಯಕ್ವಡ್ ಔಟ್ – ಕನ್ನಡಿಗನಿಗೆ ಒಲಿದ ಅದೃಷ್ಟ

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಇನ್ನೊಂದೆಡೆ ಭಾರತದ ಬೌಲರ್‌ಗಳಿಗೆ ಪಾತುಂ ನಿಸ್ಸಾಂಕ ಕಾಡಿದರು. ಅಂತಿಮವಾಗಿ ನಿಸ್ಸಾಂಕ 75 ರನ್ (53 ಎಸೆತ, 11 ಬೌಂಡರಿ) ಸಿಡಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಕೊನೆಯಲ್ಲಿ ಮಿಂಚಿದ ನಾಯಕ ದಾಸುನ್ ಶನಕ ಅಬ್ಬರದ ಅಜೇಯ 47 ರನ್ (19 ಎಸೆತ, 2 ಬೌಂಡರಿ, 5 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್, ಬುಮ್ರಾ, ಹರ್ಷಲ್ ಪಟೇಲ್, ಚಹಲ್, ಜಡೇಜಾ ತಲಾ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *