ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

Public TV
2 Min Read

ಕೀವ್: ದಾಳಿ ನಡೆಸುತ್ತಾ ಉಕ್ರೇನ್‌ ಗಡಿ ದಾಟಿ ಒಳಪ್ರವೇಶಿಸಿದ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ ಹಾಕಿದ್ದಾರೆ. ರಷ್ಯಾ ಸೈನಿಕನೆದುರು ಧೈರ್ಯವಾಗಿ ನಿಂತ ಉಕ್ರೇನ್‌ ಮಹಿಳೆ, ನಿಮ್ಮ ದೇಶಕ್ಕೆ ವಾಪಸ್‌ ಹೋಗಿ ಎಂದು ಕೂಗಾಡಿದ್ದಾರೆ.

ಉಕ್ರೇನ್‌ ಗಡಿ ಪ್ರವೇಶಿಸಿದ ಶಸಸ್ತ್ರಧಾರಿ ಸೈನಿಕನ ವಿರುದ್ಧ ಮಹಿಳೆ ಕೂಗಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವೀಡಿಯೋದಲ್ಲಿರುವ ಮಹಿಳೆಯನ್ನು ʼನಿರ್ಭಯಾʼ ಎಂದು ಕರೆಯಲಾಗಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

ಗಡಿ ಪ್ರವೇಶಿಸಿದ ಸೈನಿಕನಿಗೆ, ನೀನು ಯಾರು ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಅದಕ್ಕೆ ಸೈನಿಕ, ನಾವು ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡು ಮಾತನಾಡಿರುವ ಮಹಿಳೆ, ನೀವಿಲ್ಲಿ ಏನು ಮಾಡುತ್ತಿದ್ದೀರಾ? ನೀವ್ಯಾರು ನಮಗೆ ಬೇಡ ಎಂದು ಗರಂ ಆಗಿದ್ದಾರೆ.

ಮಿಷನ್‌ ಗನ್‌ ಹಿಡಿದಿದ್ದ ಸೈನಿಕ ಮಹಿಳೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾನೆ. ಅದಕ್ಕೆ ಸುಮ್ಮನಾಗದ ಮಹಿಳೆ, ನೀನೊಬ್ಬ ಆಕ್ರಮಣಕಾರಿ, ನೀನು ಸರ್ವಾಧಿಕಾರಿ. ಶಸಸ್ತ್ರಗಳನ್ನು ಹಿಡಿದುಕೊಂಡು ನಮ್ಮ ದೇಶದಲ್ಲಿ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

ಈ ಸೂರ್ಯಕಾಂತಿ ಬೀಜಗಳನ್ನು ತೆಗೆದುಕೊಳ್ಳಿ. ಅವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ನೀವೆಲ್ಲ ಇಲ್ಲಿ ಮಲಗಿದಾಗ ಕನಿಷ್ಠ ಪಕ್ಷ ಸೂರ್ಯಕಾಂತಿಯಾದರೂ ಬೆಳೆಯುತ್ತದೆ ಎಂದು ಸೈನಿಕನ ವಿರುದ್ಧ ಮಹಿಳೆ ಮಾರ್ಮಿಕವಾಗಿ ನುಡಿದಿದ್ದಾರೆ. ಸೂರ್ಯಕಾಂತಿ ಹೂ ಉಕ್ರೇನ್‌ ದೇಶದ ರಾಷ್ಟ್ರೀಯ ಹೂ ಆಗಿದೆ.

ಈ ವೀಡಿಯೋವನ್ನು ಅಲ್ಲೇ ಓಡಾಡುತ್ತಿದ್ದ ಸ್ಥಳೀಯರು ಸೆರೆ ಹಿಡಿದಿದ್ದಾರೆ. ನಂತರ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಗುರುವಾರ ಬೆಳಗ್ಗೆ ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದರು. ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಈವರೆಗೆ 137 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ರಷ್ಯಾ ದಾಳಿಗೆ ವಿಶ್ವದ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರಷ್ಯಾ ತನ್ನ ಕಾರ್ಯಾಚರಣೆ ಮುಂದುವರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *