ಅಂಬೇಡ್ಕರ್, ವಾಲ್ಮೀಕಿ ಭವನಗಳಲ್ಲಿ ಗ್ರಂಥಾಲಯ ನಿರ್ಮಿಸಲು ಕ್ರಮ: ಜೆ ಮಂಜುನಾಥ್

Public TV
2 Min Read

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ ನಿರ್ಮಿಸಿರುವ ಅಂಬೇಡ್ಕರ್ ಭವನ ಹಾಗೂ ಮಹರ್ಷಿ ವಾಲ್ಮೀಕಿ ಭವನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಯುವಜನರಿಗೆ ಸುಸಜ್ಜಿತ ಗ್ರಂಥಾಲಯಗಳನ್ನು ನಿರ್ಮಿಸಿ ನಿರ್ವಹಿಸಲು ಬಿಬಿಎಂಪಿ ಆಯವ್ಯಯದಲ್ಲಿ ಸೇರ್ಪಡೆಗೊಳಿಸುವಂತೆ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಂಜುನಾಥ್ ಮಾತನಾಡಿದರು. ನಗರದ ಬಹುಭಾಗಗಳಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಸಮರ್ಪಕವಾಗಿ ಉಪಯೋಗವಾಗುತ್ತಿಲ್ಲ. ಈ ಬಗ್ಗೆ ಸಮಿತಿಯ ವತಿಯಿಂದ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿ ಮೂಲಭೂತ ಸೌಕರ್ಯಗಳಿಗೆ ಅನುದಾನ ಮೀಸಲಿಡಲು ಕೋರುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ದೌರ್ಜನ್ಯ ಪ್ರಕರಣಗಳ ಸಂಬಂಧ ಬಾಧಿತರು ಪೊಲೀಸ್ ಬಳಿ ಮೊರೆ ಹೋದಾಗ ವಿಳಂಬ ಧೋರಣೆ ತೋರದೆ, ದೂರಿಗೆ ಕೂಡಲೇ ಸ್ವೀಕೃತಿಯನ್ನು ನೀಡಬೇಕು. ದೂರು ದಾಖಲಿಸಲು ಬಂದವರೊಡನೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಸೂಚಿಸಿದರು.  ಇದನ್ನೂ ಓದಿ: ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಂಗಳಿಗೆ ಒಮ್ಮೆ ಪರಿಶಿಷ್ಠ ಜಾತಿ, ಪಂಗಡದ ಮುಖಂಡರನ್ನು ಆಹ್ವಾನಿಸಿ ಸಭೆ ನಡೆಸಿ ಸಮಸ್ಯೆಗಳ ಸೂಕ್ತ ಚರ್ಚೆಗೆ ಅವಕಾಶ ಕಲ್ಪಿಸಬೇಕು. ನಿರ್ಧಿಷ್ಟವಾಗಿ ಯಾವ ಠಾಣೆಗಳಲ್ಲಿ ಈ ಸಭೆ ನಡೆಸಲಾಗುತ್ತಿಲ್ಲವೋ ಅವರ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲು ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿಗೆ ಸೂಚಿಸಿದರು.

ಹರೆಬಿನ್ನಮಂಗಲ, ಜಾಲಹೋಬಳಿ ಹಾಗೂ ಜ್ಯೋತಿಪುರ ಗ್ರಾಮಗಳಲ್ಲಿ ಫಾರಂ 53ರ ಅರ್ಜಿಗಳನ್ನು ದಾಖಲಿಸಿ ಭೂಮಿ ಸಕ್ರಮೀಕರಣಗೊಳಿಸಲು ಮಂಜೂರಾತಿ ಈಗಾಗಲೇ ನೀಡಲಾಗಿದ್ದರೂ ಪ. ಜಾ/ ಪ. ಪಂ ಫಲಾನುಭವಿಗಳಿಗೆ ಮಾತ್ರ ಸಾಗವಳಿ ಚೀಟಿ ವಿತರಿಸಿರುವುದಿಲ್ಲ ಎಂದು ಸಮಿತಿ ಸದಸ್ಯ ಹೆಣ್ಣೂರು ಶ್ರೀನಿವಾಸ್ ಸಭೆಯಲ್ಲಿ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಿವಂತೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಕೊಳಚೆ ಅಭಿವೃದ್ಧಿ ಮಂಡಳಿಯ ಹೆಸರನ್ನು ಬದಲಾಯಿಸಲು ಸದಸ್ಯರೆಲ್ಲರೂ ಸಭೆಯ ಅಧ್ಯಕ್ಷರಿಗೆ ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ: ಗೋವಿಂದ ಕಾರಜೋಳ

ದೌರ್ಜನ್ಯ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡಂತಹ ಪ.ಜಾ/ ಪ.ಪಂ ದವರ ಕುಟುಂಬದವರಿಗೆ ಅನುಕಂಪಾಧಾರಿತ ಸರ್ಕಾರಿ ನೌಕರಿ ನೀಡುವಲ್ಲಿ ಕೆಲವು ಕಡೆ ಲೋಪ ಕಂಡುಬಂದಿವೆ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್ ರೆಡ್ಡಿ, ಪ್ರಸ್ತುತ 32 ನೊಂದ ಕುಟುಂಬಗಳಿಗೆ ಪ್ರತಿ ತಿಂಗಳು 5,000 ರೂ. ಮಾಸಾಶನವನ್ನು ಕಳೆದ ಒಂದು ವರ್ಷದಿಂದ ಒದಗಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ದಕ್ಷಿಣ ಉಪವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *