ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

Public TV
1 Min Read

ಬೆಂಗಳೂರು: ನ್ಯಾಯಾಂಗ ನಿಂದನೆ ಆರೋಪದಡಿ ಬಂಧನಕ್ಕೊಳಗಾಗಿರುವ ನಟ ಚೇತನ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ನ್ಯಾಯಾಂಗ ನಿಂದನೆ ಆರೋಪದಡಿ ನಟ ಚೇತನ್‌ರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ನಂತರ ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಒಂದು ಟ್ವೀಟ್‌ ಎಡವಟ್‌ – ನಟ ಚೇತನ್ ಅರೆಸ್ಟ್‌

ವಕೀಲ ಕೆ.ಬಾಲನ್ ಅವರು ಚೇತನ್‌ ಪರವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಚೇತನ್‌ ವಿರುದ್ಧದ ದೂರಿನಲ್ಲಿ ಏನಿದೆ?
ಚೇತನ್‌ಕುಮಾರ್‌ ಅಹಿಂಸಾ ಅವರು ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ (ಮುಸ್ಲಿಂ) ಜನಾಂಗದವರಿಗೆ ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯಾಲಯ, ಸರ್ಕಾರ ಮತ್ತು ನಮ್ಮ ದೇಶದ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ, ಆಕ್ರೋಶ ಬರುವ ಹಾಗೆ ಟ್ವೀಟ್‌ ಮಾಡಿದ್ದಾರೆ. ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ ಹಾಗೂ ಇತ್ಯಾದಿಗಳನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಇದನ್ನೂ ಓದಿ : ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

ಈ ರೀತಿ ಗಲಭೆ ಉಂಟಾಗಿ ನಮ್ಮ ರಾಜ್ಯದ ಹಾಗೂ ದೇಶದ ಸಮಗ್ರತೆಯು ನಾಶವಾಗಲೆಂದು ಪ್ರಚೋದಿಸಿರುತ್ತಾರೆ. ಹೀಗೆ ಭಾರತದ ಅನೇಕ ವರ್ಗಗಳ ಮತ್ತು ಕೋಮುಗಳ ನಡುವೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡಿರುತ್ತಾರೆ. ಚೇತನ್‌ಕುಮಾರ್‌ ಅಹಿಂಸಾ ಅವರು ಈ ರೀತಿಯ ಟ್ವೀಟ್‌ಗಳನ್ನು ಮಾಡಿ ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡಿ ಜನರನ್ನು ಉದ್ರೇಖಿಸುವುದು ಇವರ ಉದ್ದೇಶವಾಗಿರುತ್ತದೆ.

ಚೇತನ್‌ಕುಮಾರ್‌ ಅಹಿಂಸಾ ಅವರು ಮಾಡಿರುವ ಟ್ವೀಟ್‌ನಿಂದಾಗಿ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಅವಮಾನ ಮಾಡಿದಂತಾಗಿದೆ. ಇದರಿಂದಾಗಿ ನ್ಯಾಯಾಲಯದಲ್ಲಿ ಹಿಜಬ್‌ ಪ್ರಕರಣ ವಿಚಾರಣೆಯನ್ನು ಕೈಬಿಡುವಂತೆ ಮಾಡುವುದು, ನಿಷ್ಪಕ್ಷಪಾತ ವಿಚಾರಣೆ ಮಾಡದಂತೆ ಹಾಗೂ ನ್ಯಾಯನಿರ್ಣಯ ಮಾಡುವುದರಿಂದ ಹಿಂದೆ ಸರಿಯುವಂತೆ ಮಾಡುವುದು ಇವರ ಟ್ವೀಟ್‌ನ ಉದ್ದೇಶವಾಗಿದೆ. ಆದ್ದರಿಂದ ಚೇತನ್‌ ಕುಮಾರ್‌ ಅಹಿಂಸಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *