ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆಯೂ ರಾಜಕೀಯ ಪ್ರೇರಿತವೋ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ನವರು ಇದ್ದಾರಾ ಎಂಬ ತನಿಖೆ ನಡೆಯುತ್ತಿದೆ ಎಂದ ಅವರು, ನಮ್ಮ ಪೊಲೀಸರ ಕೈ ಮೀರಿದರೆ ಎನ್ಐಎಗೆ ಕೊಡುವ ಬಗ್ಗೆ ನೋಡುತ್ತೇವೆ ಎಂದು ಹೇಳಿದರು.
ಈಗ ಶಿವಮೊಗ್ಗ ಶಾಂತವಾಗಿದೆ. ರಾತ್ರಿ ಇಡೀ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಶಾಂತಿ ಕದಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಶಿವಮೊಗ್ಗದ ಜನ ಸ್ಪಂದಿಸಿದ್ದಾರೆ. ಹಾಗಾಗಿ ಯಾವುದೇ ಅನಾಹುತ ಆಗಲಿಲ್ಲ ಎಂದರು.
12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೀತಿದೆ. ಹಿನ್ನೆಲೆಯಲ್ಲಿ ನೆರವು ಯಾರು ಕೊಟ್ಟರು, ವಾಹನ ಯಾರು ಒದಗಿಸಿದರು ಎನ್ನುವುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ. ನಿನ್ನೆಯೇ ಮೂವರ ಬಂಧನ ಆಗಿದೆ. ಅಮಾಯಕರನ್ನು ಬಂಧಿಸಲ್ಲ. ಯಾರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರ ಬಂಧನವಾಗಿದೆ. ತಪ್ಪಿತಸ್ಥರನ್ನು ಬಿಡಲ್ಲ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹೆಣದ ಮೇಲೆ ರಾಜಕೀಯ ಮಾಡುವ ಅಭ್ಯಾಸ ಕಾಂಗ್ರೆಸ್ಸಿಗಿಲ್ಲ: ಬಿ.ಕೆ.ಹರಿಪ್ರಸಾದ್
ಆರಗ ರಾಜೀನಾಮೆ ಕೊಡಲಿ ಎಂಬ ಡಿಕೆಶಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಹಿರಿಯರಾದ ಡಿಕೆಶಿಯ ಹೇಳಿಕೆಗೆ ಉತ್ತರಿಸಲ್ಲ. ಡಿಕೆಶಿ ಅವರ ಸರ್ಕಾರದಲ್ಲಿ ಶಾಂತಿ ಸುವ್ಯವಸ್ಥೆ ಸಮಾಧಾನಕರ ಆಗಿತ್ತು ಎಂದು ಎದೆ ಮುಟ್ಟಿ ಹೇಳಲಿ. ಅವರ ಸರ್ಕಾರದಲ್ಲಿ ಏನೇನಾಗಿತ್ತು ಎಂದು ಅವರು ಹೇಳಲಿ, ನಾನೂ ಹೇಳುತ್ತೇನೆ. ಕಾಂಗ್ರೆಸ್ ಅವರ ಟೀಕೆಗಿಂತ ರಾಜ್ಯದಲ್ಲಿ ಶಾಂತಿ ಕಾಪಾಡೋದು ಮುಖ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್
ಯಾವುದೇ ಸರ್ಕಾರದಿಂದ 24 ಗಂಟೆ ಕಾವಲು ಕಾಯಕ್ಕಾಗಲ್ಲ. ಶಿವಮೊಗ್ಗದಲ್ಲಿ ಇತ್ತೀಚೆಗೆ ಹಾವಳಿ ಜಾಸ್ತಿಯಾಗಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಮುಂದೆ ಅನಾಹುತ ಆಗದಂತೆ ತಡೆಯುವ ಕೆಲಸ ಮಾಡ್ತೇವೆ ಎಂದು ಹೇಳಿದರು.

 
			
 
		 
		

 
                                
                              
		