‘ಕನ್ನೇರಿ’ ಒಡಲೊಳಗಿದೆ ಬೇರೆಯದ್ದೇ ಲೋಕ – ಟ್ರೇಲರ್ ನೋಡಿ ಮೆಚ್ಚಿದ ಪ್ರೇಕ್ಷಕ ಮಹಾಶಯರು

Public TV
2 Min Read

ಬೆಂಗಳೂರು: ಚಂದನವನದಲ್ಲಿ ನೀನಾಸಂ ಮಂಜು ನಿರ್ದೇಶನ ಸಾರಥ್ಯದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಬಹುನಿರೀಕ್ಷಿತ ಸಿನಿಮಾ ‘ಕನ್ನೇರಿ’. ಒಂದಕ್ಕಿಂತ ಒಂದು ಮನಮಿಡಿಯೋ ಹಾಡುಗಳ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿರುವ ‘ಕನ್ನೇರಿ’ ಮಾರ್ಚ್ 4ರಂದು ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲು ಸರ್ವ ರೀತಿಯಲ್ಲೂ ಸಜ್ಜಾಗಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಝಲಕ್ ಹರಿ ಬಿಟ್ಟಿರುವ ಚಿತ್ರತಂಡ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಲೆವೆಲ್ ಹೆಚ್ಚುಮಾಡಿದೆ.

ಹಾಡುಗಳ ಮೂಲಕ ಸುದ್ದಿಯಲ್ಲಿದ್ದ ‘ಕನ್ನೇರಿ’ ಸಿನಿಮಾ ಈಗ ಟ್ರೇಲರ್ ಮೂಲಕ ಟಾಕ್ ಕ್ರಿಯೇಟ್ ಮಾಡಿದೆ. ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಖ್ಯಾತ ನಟಿ ‘ತಾರಾ ಅನುರಾಧ’ ಅವರಿಂದ ಇಂದು ಬಿಡುಗಡೆಯಾಗಿದೆ. ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ತಾರಾ ಸಿನಿಮಾ ಬಗೆಗಿರುವ ತಮ್ಮ ಕುತೂಹಲವನ್ನು ಹಂಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

‘ಕನ್ನೇರಿ’ ಟ್ರೇಲರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಖತ್ ಪಾಸಿಟಿವ್ ರೆಸ್ಪಾನ್ಸ್ ಜೊತೆಗೆ ಭರವಸೆಯ ಮಾತುಗಳನ್ನು ತನ್ನದಾಗಿಸಿಕೊಂಡಿದೆ. ಜನಪ್ರಿಯ ನಟಿ ತಾರಾ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕಾಡಿನಲ್ಲಿ ನೆಲೆ ಕಂಡುಕೊಂಡ ಜನರ ಬದುಕು, ಆ ಬದುಕಿನಲ್ಲಿರುವ ಖುಷಿ, ಅವರ ಆಚರಣೆಯಲ್ಲಿದ್ದ ಸಂತಸ, ಕಣ್ತೆರೆದು ನೋಡುವಷ್ಟರಲ್ಲಿ ಬದುಕಲ್ಲಿ ಬಂದೆರಗಿದ ತಿರುವುಗಳು, ಹೆಣ್ಣುಮಗಳೊಬ್ಬಳ ಆತಂಕದ ಛಾಯೆ, ತನಿಖೆಯ ಹಾದಿ, ಕೋರ್ಟ್ ಅಂಗಳ, ಕಾಡುವ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ಹೀಗೆ ಸಾಕಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟರ್ ಹೊತ್ತಿದೆ ‘ಕನ್ನೇರಿ’ ಟ್ರೇಲರ್.

‘ಕನ್ನೇರಿ’ ಒಡಲೊಳಗೆ ಬೇರೆಯದ್ದೇ ವಿಶೇಷತೆ ಇದೆ ಎನ್ನೋದನ್ನ ಸಾರಿ ಹೇಳುತ್ತಿದೆ. ಸಿನಿಪ್ರಿಯರ ಮನದಂಗಳದಲ್ಲಿ ಇದ್ದ ಕೌತುಕತೆಯನ್ನು ಮಗದಷ್ಟು ಹೆಚ್ಚು ಮಾಡಿದೆ. ಒಟ್ಟಿನಲ್ಲಿ, ಮೆಚ್ಚುಗೆಯ ಜೊತೆ ಸಿನಿಮಾ ಬಗ್ಗೆ ಭರವಸೆಯ ಎಳೆಯನ್ನು ಬಿಡುಗಡೆಯಾದ ಟ್ರೇಲರ್ ಸೃಷ್ಟಿಸಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಮೊದಲೇ ತಿಳಿದಂತೆ ‘ಕನ್ನೇರಿ’ ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಮಹಿಳಾ ಪ್ರಧಾನ ಚಿತ್ರ. ನಿರ್ವಸತಿಗರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನದ ಜೊತೆಗೆ ಪ್ರಸ್ತುತ ಅವರುಗಳೆಲ್ಲ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಚಿತ್ರದಲ್ಲಿದೆ. ಸಾಮಾಜಿಕ ಕಳಕಳಿ ಜೊತೆಗೆ ಮನರಂಜನೆಯನ್ನೂ ದೃಷ್ಟಿಕೋನದಲ್ಲಿಟ್ಟುಕೊಂಡು ಕಮರ್ಶಿಯಲ್ ಎಳೆಯಲ್ಲಿ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ ನಿರ್ದೇಶಕ ನೀನಾಸಂ ಮಂಜು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರ್ಚನಾ ಮಧುಸೂದನ್ ಅಭಿನಯಿಸಿದ್ದಾರೆ. ಅನಿತ ಭಟ್, ಸರ್ದಾರ್ ಸತ್ಯ, ಎಂ.ಕೆ. ಮಠ್, ಅರುಣ್ ಸಾಗರ್, ಕರಿಸುಬ್ಬು ಒಳಗೊಂಡ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿ ಬಣ್ಣಹಚ್ಚಿದ್ದಾರೆ. ಇದನ್ನೂ ಓದಿ: ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!

ಮಣಿಕಾಂತ್ ಕದ್ರಿ ಸಂಗೀತ ಸ್ಪರ್ಶ, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದ್ದು, ಗಣೇಶ್ ಹೆಗ್ಡೆ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದೆ. ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ‘ಕನ್ನೇರಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಾಮಿಸಿಂಗ್ ಎನಿಸುವ ತುಣುಕುಗಳ ಮೂಲಕ ಗಮನ ಸೆಳೆಯುತ್ತಿರುವ ‘ಕನ್ನೇರಿ’ ಚಿತ್ರ ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

Share This Article
Leave a Comment

Leave a Reply

Your email address will not be published. Required fields are marked *