ತಲೆ ಮೇಲೆ ಸೆರಗು ಹಾಕಿಕೊಳ್ಳೋದನ್ನ ಬೇಡ ಅನ್ನೋದು ಎಷ್ಟು ಸರಿ: ಸಿಎಂ ಇಬ್ರಾಹಿಂ

By
3 Min Read

ಮಂಡ್ಯ: ತಲೆ ಮೇಲೆ ಸೆರಗು ಹಾಕಿಕೊಂಡರೆ ಅದನ್ನು ಬೇಡ ಅಂದರೆ ಎಷ್ಟರ ಮಟ್ಟಿಗೆ ಸರಿ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ರಾಜ್ಯದಲ್ಲಿ ಕೇಸರಿ ಹಿಜಬ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಖಾಸುಮ್ಮನೆ ಈ ವಿಚಾರವನ್ನು ದೊಡ್ಡದು ಮಾಡಲಾಗುತ್ತಿದೆ. ತಲೆ ಮೇಲೆ ಸೆರಗು ಹಾಕಿಕೊಂಡರೆ ಅದನ್ನು ಬೇಡ ಅಂದರೆ ಎಷ್ಟರ ಮಟ್ಟಿಗೆ ಸರಿ. ನಮ್ಮ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಕೂಡ ತಲೆ ಮೇಲೆ ಸೆರಗು ಹಾಕಿಕೊಂಡಿದ್ದರು. ಇದನ್ನು ದೊಡ್ಡದು ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇಳಕಲ್ ಸೀರೆಯುಟ್ಟವರು ಸೆರಗನ್ನು ಹಾಕಿಕೊಳ್ಳುತ್ತಿದ್ದರು. ಹಿಜಾಬ್ ಎಂಬುದು ಕೂಡ ಸೆರಗು ಮುಚ್ಚಿಕೊಳ್ಳುವುದು. ಮುಂದಿನ ಚುನಾವಣೆಗೆ ಹೋಗಲು ಬಿಜೆಪಿಯವರಿಗೆ ಯಾವ ವಿಚಾರವು ಇರಲಿಲ್ಲ. ರಾಮಮಂದಿರ, ಗೋಹತ್ಯೆ ಎಲ್ಲ ವಿಚಾರ ಮುಗಿತು. ಪೆಟ್ರೋಲ್ ನೂರು ರೂಪಾಯಿ ಮಾಡಿದ್ದಾರೆ. ಅದೆಲ್ಲವನ್ನು ಮುಚ್ಚಿ ಹಾಕಲು ಹಿಜಾಬ್ ವಿಚಾರ ದೊಡ್ಡದು ಮಾಡಿದ್ದಾರೆ ಎಂದಿದ್ದಾರೆ.

ಈಶ್ವರಪ್ಪರನ್ನು ಅರೆಸ್ಟ್ ಮಾಡಿ: ಈಶ್ವರಪ್ಪ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎಂದಿದ್ದರು. ಡಿಜಿ, ಮುಖ್ಯ ಕಾರ್ಯದರ್ಶಿಗೆ ಬುದ್ದಿ ಇದಿಯಾ. ಸಂವಿಧಾನದ ಹೆಸರ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಈಶ್ವರಪ್ಪ ಹೇಳುತ್ತಾರೆ ಅಂದರೆ ಏನು ಅರ್ಥ. ಹೇಳಿದ ದಿವಸವೇ ಮಂತ್ರಿ ಮಂಡಲದಿಂದ ಹೊರಹಾಕಬೇಕಿತ್ತು. ಕೂಡಲೇ ಅರೆಸ್ಟ್ ಮಾಡಿ, ಮಂತ್ರಿ ಸ್ಥಾನದಿಂದ ಹೊರಹಾಕಬೇಕು. ಇಲ್ಲದಿದ್ದರೆ ನಾನೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ನೀನು ಕೇಸರಿ ಶಾಲು ಹಂಚುವ ಬದಲು ಪೆನ್ನು, ಪುಸ್ತಕ ಕೊಡು. ವಿಷ ಯಾಕೆ ಹಂಚುತ್ತೀಯಾ ಎಂದು ಕಿಡಿಕಾರಿದ್ದಾರೆ.

ಕೇಸರಿ ಶಾಲು, ಹಿಜಾಬ್ ವಿವಾದ: ಕೋರ್ಟ್ ತೀರ್ಪಿಗೆ ನಾವೆಲ್ಲಾ ತಲೆಬಾಗುತ್ತೇವೆ. ಕೋರ್ಟ್ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ತಲೆ ಮೇಲೆ ಸೆರಗು ಹಾಕಬೇಡ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

ಆಕೆ ಕರ್ನಾಟಕದ ಮಗಳು: ಅಷ್ಟು ಹುಡುಗರ ಮಧ್ಯೆ ಆ ಹುಡುಗಿ ಏಕಾಂಗಿಯಾಗಿ ಎದುರಿಸಿದ್ದಾಳೆ. ಇದಕ್ಕೆ ಆ ಹುಡುಗಿಯನ್ನು ಮೆಚ್ಚಬೇಕು. ಎಲ್ಲರ ಎದುರು ಧೈರ್ಯವಾಗಿ ನಿಂತಳು. ಈಕೆ ಭಾರತದ, ಕರ್ನಾಟಕದ ಮಗಳು. ಆಕೆಯನ್ನು ಮೆಚ್ಚಿ ಉಡುಗೊರೆ ಕೊಟ್ಟರೇ ಏನು ತಪ್ಪು. ಅದು ಪ್ರಚೋದನೆ ಆಗಲ್ಲ. ಜೈ ಶ್ರೀರಾಮ್ ಘೋಷಣೆ ಕೂಗಿದರೆ ಅದು ಪ್ರಚೋದನೆ ಆಗಲ್ವ? ಅಲ್ಲಾಹು ಅಕ್ಬರ್ ಅಂತ ಕೂಗಿದರೆ ಪ್ರಚೋದನೆ ಆಗುತ್ತಾ? ನನ್ನ ಭಾಷಣದಲ್ಲಿ ನಾನು ಹರಹರ ಮಹದೇವ್ ಎಂದು ಹೇಳುತ್ತೇನೆ. ಅದು ಪ್ರಚೋದನೆಯಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ನನ್ನ ಜೊತೆ ಮಾತನಾಡುತ್ತಿದ್ದಾರೆ. ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲವರು ನನ್ನ ಬಳಿ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ದೆಹಲಿಯಿಂದಲು ಮಾತನಾಡಲು ಆಹ್ವಾನ ಬಂದಿದೆ. ಯಾರು ಕರೆದ್ದಾರೆ, ಯಾರನ್ನು ಭೇಟಿಯಾಗಬೇಕು ಎಂಬುವುದನ್ನು ಈಗ ಹೇಳಲ್ಲ. ದೆಹಲಿಗೆ ಹೋಗುವ ಬಗ್ಗೆ ಒಂದೆರಡು ದಿನದಲ್ಲಿ ದಿನಾಂಕ ಹೇಳುತ್ತೇವೆ ಎಂದಿದ್ದಾರೆ. ಹೋಗಬೇಕಾ, ಬೇಡವಾ ಎಂಬುದನ್ನು ಜನರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

ನಾವು ಮೋದಿ ಬಳಿ ದುಡ್ಡಿಗೆ ಅಂಗಲಾಚುವ ಪರಿಸ್ಥಿತಿಗೆ ಬಂದಿದ್ದೇವೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಪರಿಸ್ಥಿತಿ ಇರಲಿಲ್ಲ. ಅಂದು ದೇವೇಗೌಡರ ನಿವಾಸ ಆರೂವರೆ ಕೋಟಿ ಕನ್ನಡಿಗರಿಗೆ ಬಾಗಿಲು ತೆರೆದಿತ್ತು. ಡಾ.ರಾಜ್ ಕುಮಾರ್ ಅವರಿಗೆ ದಾದಾಸಾಹೇಬ್ ಪಾಲ್ಕೆ ಅವಾರ್ಡ್ ಕೊಟ್ಟ ಕಾಲ ಅದು. ಸಾಕಷ್ಟು ನೀರಾವರಿ ಯೋಜನೆ, ರಾಜ್ಯಕ್ಕೆ ಹಣ ಹರಿದುಬರುತ್ತಿತ್ತು. ಈಗ ನಾವು ದೆಹಲಿಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ವ್ಯಕ್ತಿಗತವಾದಂತೆ ಬೇಡಿಕೆಗಿಂತ ರಾಜ್ಯದ ಹಿತದೃಷ್ಟಿ ಮುಖ್ಯ. ಅಂದು ದೇವೇಗೌಡರ ಮಾರ್ಗ ದರ್ಶನ ಪಡೆದಿದ್ದೆ. ಇಂದು ಕೂಡ ಅವರ ಮಾರ್ಗದರ್ಶನ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *