ಕೊಲ್ಕತ್ತಾ: ಕೊಲ್ಕತ್ತಾಕ್ಕೆ ಎರಡನೇ ವಿಮಾನ ನಿಲ್ದಾಣ ಸೇರಿದಂತೆ ಪಶ್ಚಿಮ ಬಂಗಾಳಕ್ಕೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರವು ವಿಸ್ತೃತಗೊಳಿಸಿದೆ. ಆದರೆ ಇದಕ್ಕೆ ಮಮತಾ ಬ್ಯಾನರ್ಜಿ ಸರ್ಕಾರವು ಭೂಮಿಯನ್ನು ಒದಗಿಸಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯಕ್ಕಿಂತಲೂ ಅಧಿಕ ಜನರು ಬರುವುದನ್ನು ಗಮನಿಸಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ. ಈ ಬಗ್ಗೆ ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯೊಂದಿಗೆ ಮಾತುಕತೆಗೆ ಕೇಳುತ್ತಿದ್ದೇನೆ. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಿಡಿಕಾರಿದರು.
ನಾವು ಕೋಲ್ಕತ್ತಾದಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದೇವೆ. ಈ ಬಗ್ಗೆ ಹಲವಾರು ವರ್ಷಗಳಿಂದ ಹೊಸ ಸೈಟ್ಗಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಯಾವುದಕ್ಕೂ ಸಹಕರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸೇಡಂ ಬಿಜೆಪಿ ಶಾಸಕ ತೇಲ್ಕೂರ್ಗೆ ಮಹಿಳೆ ಬ್ಲಾಕ್ಮೇಲ್
ಪ್ರಸ್ತುತ ಎನ್ಎಸ್ಸಿಬಿಐ ವಿಮಾನ ನಿಲ್ದಾಣಕ್ಕೆ 700 ಕೋಟಿ ರೂ. ಹೂಡಿಕೆ ಮಾಡುತ್ತಿದ್ದೇವೆ. 300 ಕೋಟಿ ವೆಚ್ಚದಲ್ಲಿ ಹೊಸ ಟೆಕ್ನಿಕಲ್ ಬ್ಲಾಕ್ ಕಮ್ ಕಂಟ್ರೋಲ್ ಟವರ್ ಕಾರ್ಯಾರಂಭ ಮಾಡಲಾಗಿದ್ದು, 265 ಕೋಟಿ ವೆಚ್ಚದಲ್ಲಿ ಹೊಸ ಟ್ಯಾಕ್ಸಿವೇ ನಿರ್ಮಿಸಲಾಗುತ್ತಿದೆ ಜೊತೆಗೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದೊಂದಿಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು 110 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈಗಿರುವ ವಿಮಾನ ನಿಲ್ದಾಣದ ಕಟ್ಟಡ 2.5 ಕೋಟಿ ಜನರು ಬರವಂತೆ ಇದೆ. ಆದರೆ ಈ ಮಹಾನಗರದಿಂದ ವಿಮಾನ ಯಾನ ಕೈಗೊಳ್ಳುವವರು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3.5 ಕೋಟಿ ಜನರು ಬರಬಹುದಾದಷ್ಟು ಸಾಮರ್ಥ್ಯವುಳ್ಳ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ
ಈ ಪೂರ್ವ ಮಹಾನಗರಕ್ಕೆ ಮತ್ತು ಅಲ್ಲಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಪೂರೈಸಲು 2 ಲಕ್ಷ ಚದರ ಮೀಟರ್ನ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಏರ್ಪೋರ್ಟ್ ಗೆ ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್ ಕೂಡ ಒಂದು ಸಂಭವನೀಯ ಸ್ಥಳವಾಗಿದೆ ಎಂದು ಹೇಳಿದರು.

 
			
 
		 
		 
		

 
                                
                              
		