ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

Public TV
1 Min Read

ಚಂಡೀಗಢ: ಅಕ್ರಮ ಮರಳುಗಾರಿಕೆಯಲ್ಲಿ ತನ್ನ ಸೋದರಳಿಯನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲೇ, ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡಿದೆ. ಅದಕ್ಕೆ ನಾವು ಯಾವುದೇ ಆಕ್ಷೇಪಣೆ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚನ್ನಿ ಅವರ ಸೋದರಳಿಯನ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಒತ್ತಡ ಸೃಷ್ಟಿಸಲು ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಲೋಕ ಕಾಂಗ್ರೆಸ್ ಸಂಸ್ಥಾಪಕ ಕ್ಯಾಪ್ಟನ್ ಅಮರೀಂದರ್ ಸಿಂಗ್, ತನಿಖಾ ಸಂಸ್ಥೆ ತನ್ನ ಕೆಲಸವನ್ನು ಮಾಡಿದೆ. ಇದಕ್ಕೆ ರಾಜಕೀಯ ಪಕ್ಷವನ್ನು ಏಕೆ ದೂಷಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಭೂಪೇಂದ್ರ ಸಿಂಗ್ ಹನಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿತ್ತು. ನಂತರ ಜಾರಿ ನಿರ್ದೇಶನಾಲಯ ಗುರುವಾರ ತಡರಾತ್ರಿ ಬಂಧಿಸಿದೆ. ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‍ಎ)ಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಜಲಂಧರ್‍ನಿಂದ ಬಂಧಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪೇಂದ್ರ ಸಿಂಗ್ ಹನಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಫೋನ್‍ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *