ನಂದಿಬೆಟ್ಟಕ್ಕೆ ಮುತ್ತಿಟ್ಟ ಮೋಡಗಳು – ಸೂರ್ಯೋದಯ ಕಂಡು ಸಂತಸಗೊಂಡ ಪ್ರವಾಸಿಗರು

Public TV
1 Min Read

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದು ಕಂಡು ಬಂದ ಅಪರೂಪದ ದೃಶ್ಯವೊಂದು ಪ್ರವಾಸಿಗರು ಮನಸೋಲುವಂತೆ ಮಾಡಿದೆ.

ಬೆಳ್ಳಂ ಬೆಳಗ್ಗೆ ಮೋಡಗಳು ನಂದಿಬೆಟ್ಟವನ್ನು ಸುತ್ತುವರೆದಿದ್ದು, ಭೂಮಿ, ಬಾನು ಒಂದಾದಂತೆ ಭಾಸವಾದ ಅಪರೂಪದ ದೃಶ್ಯ ಪ್ರವಾಸಿಗರ ಪಾಲಿಗೆ ಸಖತ್ ಖುಷಿ ತಂದಿದೆ. ಆಕಾಶದಿಂದ ಧರಗಿಳಿದು ಬಂದ ಮೋಡಗಳು ನಂದಿ ಬೆಟ್ಟದಿಂದ ಇಡೀ ಭೂಮಿಗೆ ಹೊದಿಕೆಯಂತೆ ಕಂಡುಬಂದಿದ್ದು, ಹಾಲಿನ ನೊರೆಯಂತಹ ಬೆಳ್ಳನೆಯ ಮೋಡಗಳ ಮೈಮಾಟದ ದೃಶ್ಯ ವಾಹ್ ಎನಿಸುವಂತೆ ಕಂಡಿದೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

ಪ್ರೇಮಧಾಮ ನಂದಿಗಿರಿಧಾಮ ಅಕ್ಷರಶಃ ಸ್ವರ್ಗಧಾಮದಂತೆ ಪ್ರವಾಸಿಗರ ಕಣ್ಣುಗಳನ್ನು ಅರಳುವಂತೆ ಮಾಡಿದೆ. ಮೋಡಗಳಿಂದ ಉದಯಿಸಿದ ಅರುಣೋದಯದ ಆಗಮನ ಪ್ರವಾಸಿಗರ ಪಾಲಿಗೆ ರಸದೌತಣ ಎಂಬತಾಗಿದೆ. ಅಂದಹಾಗೆ ವರ್ಷದ ಕೊನೆ ಹಾಗೂ ಆರಂಭದಲ್ಲಿ ಅತಿಯಾದ ಚಳಿಗಾಲದ ಕೊನೆಯ ನಡುವೆ ಈ ರೀತಿಯ ಅಪರೂಪದ ದೃಶ್ಯಗಳು ಪ್ರವಾಸಿಗರಿಗೆ ಕಾಣಸಿಗಲಿದ್ದು, ಇಂದು ಈ ಅಪರೂಪದ ದೃಶ್ಯ ಕಂಡ ನಾವೇ ಧನ್ಯರು ಅಂತ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಸರಿಸುಮಾರು ಸಮುದ್ರ ಮಟ್ಟದಿಂದ 4,851 ಅಡಿ ಎತ್ತರದ ನಂದಿಬೆಟ್ಟದಿಂದ ಕೆಳಭಾಗಕ್ಕೆ ನೋಡಿದರೆ ಕಣ್ಣು ಹಾಯಿಸಿದಷ್ಟು ದೂರ ಭೂಮಿ, ನಗರ, ಕಟ್ಟಡಗಳು, ಮರ, ಗಿಡಗಳು ಕಣ್ಣಿಗೆ ಕಾಣುತ್ತವೆ. ಆದರೆ ಇಂದು ಅವೆಲ್ಲವನ್ನೂ ಇಂದು ಮೋಡಗಳು ಮರೆಮಾಚಿ ಭೂಮಿಗೆ ಮೋಡಗಳ ಹೊದಿಕೆ ಹೊಂದಿಕೊಂಡಂತೆ ಕಂಡಿತ್ತು. ನಂದಿಬೆಟ್ಟ ಹಾಗೂ ಕೆಳಭಾಗದ ಭೂ ಭಾಗದ ನಡುವೆ ಮೋಡಗಳು ಅಡ್ಡಿಯಾಗಿ ಎರಡರ ನಡುವೆ ಹಾಲಿನ ನೊರೆಯ ಸಮುದ್ರವೇ ಸೃಷ್ಟಿಯಾದಂತೆ ಭಾಸವಾಗಿತ್ತು. ಒಂದು ರೀತಿ ಸ್ವರ್ಗತಾಣದಲ್ಲಿ ವಿಹರಿಸಿದ ಅನುಭವ ಪ್ರವಾಸಿಗರದಾಗಿತ್ತು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

Share This Article
Leave a Comment

Leave a Reply

Your email address will not be published. Required fields are marked *