2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

Public TV
2 Min Read

ಚಂಡೀಗಢ: ಫೈನಾನ್ಸ್ ಕಂಪನಿಯಲ್ಲೇ 2.18 ಕೋಟಿ ರೂ. ವಂಚಿಸಿ ವ್ಯಕ್ತಿಯೊಬ್ಬ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿರುವ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಫೈನಾನ್ಸ್ ಕಂಪನಿಗೆ ಗುರುಗ್ರಾಮ್ ನಿವಾಸಿ ಪ್ರಮೋದ್ ಸಿಂಗ್ ಸುಮಾರು 2.18 ಕೋಟಿ ರೂ. ವಂಚಿಸಿದ್ದನು. ಈ ಪರಿಣಾಮ ಫೈನಾನ್ಸ್ ಕಂಪನಿ 2018 ರಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿತ್ತು. ಆದರೆ ದೂರು ದಾಖಲಾದ 3 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

POLICE JEEP

ಜಂಟಿ ಪೊಲೀಸ್ ಕಮಿಷನರ್(ಆರ್ಥಿಕ ಅಪರಾಧ ವಿಭಾಗ) ಛಾಯಾ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ಸಿಂಗ್ ಆರಂಭದಲ್ಲಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಲು ಸಂಸ್ಥೆಯಿಂದ 27.5 ಲಕ್ಷ ರೂಪಾಯಿ ಸಾಲ ಪಡೆದು ಆರಂಭಿಕ ಕಂತುಗಳನ್ನು ಪಾವತಿಸಿ ಫೈನಾನ್ಸರ್ ನಂಬಿಕೆ ಗಳಿಸಿದ್ದಾನೆ. ನಂತರ ಅವನು ನಾಲ್ಕು ಬಾರಿ ಸಾಲ ಪಡೆದುಕೊಂಡಿದ್ದು, ಕಂತನ್ನು ಸ್ವಲ್ಪ ದಿನಗಳ ನಂತರ ಪಾವತಿಸುತ್ತಿದ್ದು, ಥಟ್ಟನೆ ಹಣ ಕಟ್ಟುವುದನ್ನೆ ನಿಲ್ಲಿಸಿದ್ದಾನೆ. ಆಗ ಫೈನಾನ್ಸ್ ಕಂಪನಿ ಆರೋಪಿ ವಿರುದ್ಧ ದೂರು ನೀಡಿದೆ ಎಂದು ವಿವರಿಸಿದ್ದಾರೆ.

ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ಸಿಂಗ್ ಜೊತೆ ಕೈಜೋಡಿಸಿದ್ದರು. ಸಿಂಗ್ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿತ್ತು. ಪರಿಣಾಮ ಸಿಂಗ್‍ನನ್ನು ಹುಡುಕಲು ಸುದೀರ್ಘ ಕಾರ್ಯಚರಣೆಯನ್ನು ಮಾಡಲಾಗಿತ್ತು. ಮೂರು ವರ್ಷಗಳ ಕಾರ್ಯಚರಣೆ ನಂತರ ಗುರುಗ್ರಾಮದಲ್ಲಿ ಸಿಂಗ್‍ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಸಿಂಗ್ ಮೂರು ವರ್ಷಗಳಲ್ಲಿ ಐದು ಮರ್ಸಿಡಿಸ್ ಕಾರುಗಳನ್ನು ಖರೀದಿಸಿದ್ದಾನೆ. ಅವೆಲ್ಲಕ್ಕೂ ಅದೇ ಸಂಸ್ಥೆ ಹಣಕಾಸು ಒದಗಿಸಿದೆ. ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ವಾಹನಗಳ ಮಾಹಿತಿಯನ್ನು ದಾಖಲೆಗಳಿಂದ ತೆಗೆದುಹಾಕಿದ್ದಾರೆ. ವಾಹನಗಳ ಮಾಹಿತಿಗಳನ್ನು ಡಿಲೀಟ್ ಮಾಡಿದರೆ ಆರೋಪಿ ಮೋಸದಿಂದ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‍ಗಳಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವೇನು ದೊಡ್ಡ ಸಮಾವೇಶ ಮಾಡಿ ವಿದ್ಯಾರ್ಥಿಗಳ ದುರ್ಬಳಕೆ ಮಾಡಿಲ್ಲ: ಜಗದೀಶ್ ಶೆಟ್ಟರ್

ಸಿಂಗ್ ಗುರುಗ್ರಾಮದಲ್ಲಿರುವ ಕಾಲ್ ಸೆಂಟರ್‌ಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುವ ವ್ಯವಹಾರವನ್ನು ನಡೆಸುತ್ತಿದ್ದ. ಅಲ್ಲದೆ ಐಷಾರಾಮಿ ಕಾರುಗಳ ಸಮೂಹವನ್ನೇ ಹೊಂದಿದ್ದ. ಆದರೆ ಹಲವಾರು ಕಾಲ್ ಸೆಂಟರ್‍ಗಳನ್ನು ಮುಚ್ಚಿದ್ದರಿಂದ ಸಿಂಗ್ ನಷ್ಟ ಅನುಭವಿಸಿದ್ದು, ಹಣಕ್ಕಾಗಿ ವಾಹನದ ದಾಖಲೆಗಳನ್ನು ನಕಲಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *