ವೀಕೆಂಡ್‌ ಕರ್ಫ್ಯೂ ರದ್ದು : ಸಿಎಂ ಕೋವಿಡ್‌ ಸಭೆಯ ಇನ್‌ಸೈಡ್‌ ಸ್ಟೋರಿ

Public TV
2 Min Read

ಬೆಂಗಳೂರು: ಜನಾಕ್ರೋಶ ಮತ್ತು ಪಕ್ಷದಲ್ಲಿಯೇ ಕೇಳಿಬಂದ ಅಪಸ್ವರಕ್ಕೆ ಬೆಚ್ಚಿದ ಸರ್ಕಾರ ಕಡೆಗೂ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ. ಇವತ್ತು ಮಧ್ಯಾಹ್ನ 2 ಗಂಟೆಗಳ ಕಾಲ ತಜ್ಞರು ಮತ್ತು ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿಗಳು, ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ವೀಕೆಂಡ್ ಲಾಕ್‍ಡೌನ್ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. ಚೇತರಿಕೆ ಪ್ರಮಾಣವೂ ಹೆಚ್ಚಿದೆ ಎಂಬ ಅಂಶವನ್ನು ಇವತ್ತಿನ ಸಭೆ ಪ್ರಮುಖವಾಗಿ ಪರಿಗಣಿಸಿತು. ಸಾರ್ವಜನಿಕರ ಬೇಡಿಕೆ ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಸದ್ಯಕ್ಕೆ ವಾರಂತ್ಯದ ಕರ್ಫ್ಯೂ ಹಿಂಪಡೆಯಲು ಸಭೆ ನಿರ್ಧರಿಸಿತು. ಆದರೆ ಮುಂದಿನ ವಾರದ ನಂತರ ಸೋಂಕು ಪರಾಕಾಷ್ಠೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಒಂದೊಮ್ಮೆ ಮುಂದಿನ ವಾರ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದಲ್ಲಿ ಮತ್ತೆ ನಿರ್ಬಂಧಗಳನ್ನು ಜಾರಿ ಮಾಡುವ ಬಗ್ಗೆ ಮತ್ತೊಮ್ಮೆ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಲು ಸಿಎಂ ತೀರ್ಮಾನಿಸಿದ್ದಾರೆ.

ಎಲ್ಲೆಲ್ಲಿ 50:50 ನಿಯಮ?
ವಾರದ 7 ದಿನವೂ ರಾತ್ರಿ 10ರಿಂದ ಬೆಳಗ್ಗೆ 5ರವರೆಗೂ ರಾತ್ರಿ ಕರ್ಫ್ಯೂ ಇರಲಿದೆ. ಮಾಲ್, ಥಿಯೇಟರ್, ಹೋಟೆಲ್, ಬಾರ್, ಕ್ಲಬ್-ಪಬ್, ಜಿಮ್‌ನಲ್ಲಿ ವಾರಂತ್ಯವೂ 50:50 ರೂಲ್ಸ್ ಮುಂದುವರಿಯಲಿದೆ. ದೇಗುಲ – 50 ಮಂದಿಗೆ ಅವಕಾಶ ನೀಡಿದ್ದು ಸಭೆ-ಸಮಾರಂಭ, ಜಾತ್ರೆ, ಪಾದಯಾತ್ರೆಗೆ ನಿರ್ಬಂಧ ಹೇರಲಾಗಿದೆ. ಮದುವೆ – ಒಳಾಂಗಣದಲ್ಲಿ 100/ ಹೊರಾಂಗಣದಲ್ಲಿ 200 ಮಂದಿ ಭಾಗಿಯಾಗಬಹುದು.

ತಾಂತ್ರಿಕ ಸಲಹಾ ಸಮಿತಿ ಹೇಳಿದ್ದೇನು?
ಸೋಂಕು ಇನ್ನಷ್ಟು ಹೆಚ್ಚಿದ್ದರೂ ಸಾವು ಹೆಚ್ಚು ಆಗುವುದಿಲ್ಲ. ಆಸ್ಪತ್ರೆಗೆ ಸೇರುವವರ ಸಂಖ್ಯೆಯೂ ಜಾಸ್ತಿ ಆಗುವುದಿಲ್ಲ. ಆದರೆ ಹೊರ ರೋಗಿ ವಿಭಾಗ(ಒಪಿಡಿ) ಮೇಲೆ ಮುಂದೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರಿಯಾಗಿ ನಿಭಾಯಿಸಬೇಕು. ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ತೆರವು ಮಾಡಬಹುದು. ನೈಟ್ ಕರ್ಫ್ಯೂ, 50:50 ರೂಲ್ಸ್ ಮುಂದುವರೆಸಿದರೆ ಉತ್ತಮ. ಇದನ್ನೂ ಓದಿ: ಕೊರೊನಾ ರಾಜ್ಯದಲ್ಲಿ ಏರಿಕೆ , ಬೆಂಗ್ಳೂರಲ್ಲಿ ಇಳಿಕೆ – ಒಟ್ಟು 48,049 ಕೇಸ್, 22 ಸಾವು

ಆರೋಗ್ಯ ಇಲಾಖೆ ಹೇಳಿದ್ದೇನು?
2 ವಾರಗಳ ವೀಕೆಂಡ್ ಕರ್ಫ್ಯೂ‌ ಯಶಸ್ವಿಯಾಗಿದ್ದು, ಬೆಂಗಳೂರಲ್ಲಿ ದೊಡ್ಡ ಮಟ್ಟದಲ್ಲಿ ಸೋಂಕು ಹಬ್ಬುವುದು ತಪ್ಪಿದೆ. ವೀಕೆಂಡ್ ಕರ್ಫ್ಯೂ ಇಲ್ಲದಿದ್ದರೆ ಇಷ್ಟೊತ್ತಿಗೆ ರಾಜ್ಯದಲ್ಲಿ 60-70 ಸಾವಿರ ಕೇಸ್ ಇರುವ ಸಾಧ್ಯತೆಯಿತ್ತು.

ಬಿಬಿಎಂಪಿ ಹೇಳಿದ್ದೇನು?
ಗುರುವಾರ ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆಯ ಕೇಸ್ ಬಂದಿದ್ದು 8 ವಲಯದ ಪೈಕಿ 4 ರೆಡ್ ಝೋನ್‍ನಲ್ಲಿದೆ. ಆಸ್ಪತ್ರೆ ದಾಖಲಾತಿ ಕಡಿಮೆ ಇದ್ದರೂ ವೀಕೆಂಡ್ ಕರ್ಫ್ಯೂ ಅಗತ್ಯ ಇದೆ. ಇನ್ನೊಂದು ವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ. ಇದನ್ನೂ ಓದಿ: ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ – 35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

ಸಚಿವರು ಹೇಳಿದ್ದೇನು?
ಜನರ ಆಕ್ರೋಶ ಹೆಚ್ಚಾಗುತ್ತಿದ್ದು ವೀಕೆಂಡ್ ಲಾಕ್ ರದ್ದು ಮಾಡಿದರೇ ಉತ್ತಮ. ತಜ್ಞರ ವರದಿಯನ್ನೂ ಪರಿಗಣಿಸಬೇಕು. ಕೊನೆಯಲ್ಲಿ ನಿಮ್ಮ ತೀರ್ಮಾನವೇ ಅಂತಿಮ.

Share This Article
Leave a Comment

Leave a Reply

Your email address will not be published. Required fields are marked *