ಮುಂಬರುವ ಬಜೆಟ್‍ನಲ್ಲಿ ಅರಣ್ಯ ಇಲಾಖೆಯ ಅನುದಾನದಲ್ಲಿ ಕಡಿತ ಮಾಡ್ಬೇಡಿ: ಉಪ ಸಂರಕ್ಷಣಾಧಿಕಾರಿ ಮನವಿ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಮುಂಬರುವ ಬಜೆಟ್ ನಲ್ಲಿ ಅರಣ್ಯ ಇಲಾಖೆಯ ಅನುದಾನದಲ್ಲಿ ಕಡಿತವಾಗದಂತೆ ಕ್ರಮ ವಹಿಸುವಂತೆ ಬೆಳಗಾವಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಬಾನು ಜಿಪಿ ಅರಣ್ಯ ಸಚಿವ ಉಮೇಶ್ ಕತ್ತಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ 8 ವರ್ಷಗಳಿಂದ ಬಜೆಟ್ ನಲ್ಲಿ ಅರಣ್ಯ ಇಲಾಖೆಗೆ ನೀಡುವ ಅನುದಾನದಲ್ಲಿ ಶೇ.8 ರಿಂದ 10 ರಷ್ಟು ಕಡಿತ ಮಾಡುತ್ತಿದ್ದು, ಈ ಬಾರಿಯ ಬಜೆಟ್ ನಲ್ಲಿ ಅರಣ್ಯ ಇಲಾಖೆಯ ಅನುದಾನದಲ್ಲಿ ಯಾವುದೇ ಕಡಿತವಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಿಕೊಂಡರು.

ನಗರ ಪ್ರದೇಶಗಳಲ್ಲಿ ಹಸಿರುಕರಣ ಮಾಡಲು ಸಾಕಷ್ಟು ಹಣ ಮೀಸಲಿಟ್ಟಿದ್ದರು. ಆ ಹಣದ ಸದ್ಬಳಕೆ ಆಗುತ್ತಿಲ್ಲ. ಮಹಾ ನಗರ ಸಭೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್‍ಗಳಲ್ಲಿ ಅರಣ್ಯೀಕರಣಕ್ಕೆ ಮೀಸಲಿಟ್ಟಿರುವ ಹಣ ಪೋಲಾಗುತ್ತಿದೆ. ನಗರದಲ್ಲಿ ಅರಣ್ಯ ಬೆಳೆಸುವ ಬದಲು ಆ ಹಣದಲ್ಲಿ ಕಾಂಕ್ರಿಟ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇವೆಲ್ಲವುಗಳಿಗೂ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ – ಇಬ್ಬರು ಅರೆಸ್ಟ್, ಮದುಮಗ ನಾಪತ್ತೆ

ಇದಕ್ಕೆ ಸ್ಪಂದನೆ ನೀಡಿದ ಸಚಿವ ಉಮೇಶ್ ಕತ್ತಿ, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಈ ಬಾರಿಯ ಬಜೆಟ್ ನಲ್ಲಿ ಅರಣ್ಯ ಇಲಾಖೆಯ ಅನುದಾನದ ಪಾಲಿನಲ್ಲಿ ಯಾವುದೇ ಕಡಿತಗೊಳಿಸದಂತೆ ಮನವಿ ಮಾಡುತ್ತೇನೆ. ಹಾಗೂ ನಗರ ಪ್ರದೇಶಗಳಲ್ಲಿನ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಸಾಲಿಮಠ, ವಲಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ್, ಉಪ ವಲಯ ಅರಣ್ಯಾಧಿಕಾರಿ ಗಜಾನನ ಪಾಟೀಲ್, ಪ್ರದೀಪ್ ಮಗದುಮ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *